ಬೆಂಗಳೂರು, ಫೆ.20- ಲೋಕಾಯುಕ್ತ ನ್ಯಾಯಮೂರ್ತಿ ಹುದ್ದೆಗೆ ಎಸ್.ಆರ್.ನಾಯಕ್ ಅವರನ್ನು ನೇಮಕ ಮಾಡಬಾರದೆಂದು ಬಿಜೆಪಿ, ಎಎಪಿ , ಜನಸಂಘರ್ಷ ಸಮಿತಿ ಮತ್ತಿತರ ಸಂಘಟನೆಗಳು ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿವೆ. ಕಾನೂನು ಬಾಹಿರವಾಗಿ ನಿವೇಶನ ಪಡೆದಿರುವುದು ಸೇರಿದಂತೆ ಕೆಲವು ಆರೋಪಗಳನ್ನು ಎದುರಿಸುತ್ತಿರುವ ಹಾಲಿ ಕಾನೂನು ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ್ ಅವರನ್ನು ಲೋಕಾಯುಕ್ತ ಹುದ್ದೆಗೆ ಪರಿಗಣಿಸಬಾರದೆಂಬುದು ಬಿಜೆಪಿ ಹಾಗೂ ಇತರೆ ಸಂಘಟನೆಗಳ ಪ್ರಮುಖ ಒತ್ತಾಯವಾಗಿದೆ.
ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಬಿಜೆಪಿಯ ವಿರೋಧದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರವಾಗಿರುವ ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಎಸ್.ಆರ್.ನಾಯಕ್ ಅವರನ್ನು ನೇಮಕ ಮಾಡಲು ಮುಂದಾಗಿದ್ದಾರೆ. ಆದರೆ ಇದನ್ನು ಪ್ರಬಲವಾಗಿ ವಿರೋಸಿರುವ ಬಿಜೆಪಿ, ಎಎಪಿ, ಜನಸಂಘರ್ಷ ಸಮಿತಿ ಹಾಗೂ ಕೆಲವು ಮಾಹಿತಿ ಹಕ್ಕು ಹೋರಾಟಗಾರರು ಎಸ್.ಆರ್.ನಾಯಕ್ ನೇಮಕವನ್ನು ತಡೆಯಲು ರಾಜ್ಯಪಾಲರಿಗೆ ದೂರು ನೀಡಲಿದ್ದಾರೆ.
ಒಂದೆರಡು ದಿನಗಳಲ್ಲಿ ಅಕೃತವಾಗಿ ಎಸ್.ಆರ್.ನಾಯಕ್ ಹೆಸರನ್ನು ರಾಜ್ಯಪಾಲರ ಅಂಕಿತಕ್ಕೆ ಸರ್ಕಾರ ಕಳುಹಿಸಿಕೊಡಲಿದೆ. ಈಗಾಗಲೇ ನಾಯಕ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಈ ಮೊದಲೇ ನಾಯಕ್ ವಿರುದ್ಧ ಜನಸಂಘರ್ಷ ಸಮಿತಿಯ ಮುಖಂಡ ಆದರ್ಶ ಅಯ್ಯರ್ ಎಂಬುವರು ಲೋಕಾಯಕ್ತ ಎಡಿಜಿಪಿಗೆ ದಾಖಲೆಗಳ ಸಮೇತ ದೂರು ನೀಡಿದ್ದಾರೆ. ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿರುವ ಸಹಕಾರ ಸಂಘದಲ್ಲಿ ಎಸ್.ಆರ್.ನಾಯಕ್ ಸುಳ್ಳು ಮಾಹಿತಿ ನೀಡಿ ಹಾಗೂ ಕಾನೂನು ಬಾಹಿರವಾಗಿ ನಿವೇಶನ ಪಡೆದಿದ್ದಾರೆಂಬ ಆರೋಪವಿದೆ. ಇದರ ಬಗ್ಗೆ ತನಿಖೆ ನಡೆಸುವಂತೆ ಆದರ್ಶ ಅಯ್ಯರ್ ಅವರು ಲೋಕಾಯುಕ್ತ ಸಂಸ್ಥೆಗೆ ದೂರು ದಾಖಲಿಸಿದ್ದಾರೆ.
ಇದರ ಜತೆಗೆ ಎಸ್.ಆರ್.ನಾಯಕ್ ಈ ಹಿಂದೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದ ವೇಳೆ ಅಕಾರ ದುರುಪಯೋಗಪಡಿಸಿಕೊಂಡ ಆರೋಪವೂ ಇದೆ. ಸಜ್ಜಾದ ಬಿಜೆಪಿ: ಸರ್ಕಾರ ತಮ್ಮ ಅಭಿಪ್ರಾಯವನ್ನು ಲೆಕ್ಕಿಸದೆ ನಾಯಕ್ ಅವರನ್ನೇ ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಲು ಮುಂದಾಗಿರುವುದನ್ನು ವಿರೋಸಿ ಬಿಜೆಪಿ ರಾಜಭವನ ಕದ ತಟ್ಟಲು ಮುಂದಾಗಿದೆ. ಈಗಾಗಲೇ ನಾಯಕ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ದಾಖಲೆಗಳನ್ನು ಬಿಜೆಪಿ ಕಾನೂನು ಘಟಕ ಸಂಗ್ರಹಿಸಿದೆ.
ಆರೋಪಗಳೇನು: ಎಸ್.ಆರ್.ನಾಯಕ್ ಬೆಂಗಳೂರಿನ ಎಚ್ಎಸ್ಆರ್ ಲೇ ಔಟ್ನಲ್ಲಿ ಬಿಡಿಎ ವತಿಯಿಂದ 2400 ಚದರ ಅಡಿ ಹಾಗೂ ವಿದ್ಯಾರಣ್ಯಪುರದಲ್ಲಿ 2920 ಚದರ ಅಡಿಯ ನಿವೇಶನಗಳನ್ನು ಕಾನೂನು ಬಾಹಿರವಾಗಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಆರ್ಎಂವಿ ಬಡಾವಣೆಯಲ್ಲಿ ಸುಮಾರು 10,800 ಚದರ ಅಡಿಯಲ್ಲಿ ಬೃಹತ್ ಬಂಗಲೆಯನ್ನು ಕಟ್ಟಿಕೊಂಡಿದ್ದಾರೆ. ಒಟ್ಟು 5 ಕೋಟಿಗೂ ಹೆಚ್ಚು ಬೆಲೆ ಬಾಳುವ ನಿವೇಶನ ಪಡೆದಿರುವುದು ದಾಖಲೆಗಳಿಂದ ಕಂಡು ಬಂದಿದೆ.
ಹೀಗಾಗಿ ಬಿಜೆಪಿ ಹಾಗೂ ಎಎಪಿ ಸೇರಿದಂತೆ ಕೆಲವು ಸಂಘಟನೆಗಳು ನಾಯಕ್ ಆಯ್ಕೆಯಾಗುವುದನ್ನು ತಡೆಗಟ್ಟಲು ರಾಜಭವನ ಕದ ತಟ್ಟುತ್ತಿವೆ. ಇದರ ಜತೆಗೆ ಬಿಜೆಪಿ ರಾಜ್ಯಾದ್ಯಂತ ಮುಖ್ಯಮಂತ್ರಿ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಒಟ್ಟಿನಲ್ಲಿ ಲೋಕಾಯುಕ್ತಕ್ಕೆ ಹಿಡಿದಿರುವ ಗ್ರಹಣ ಬಿಡುವ ಲಕ್ಷಣ ಕಂಡು ಬರುತ್ತಿಲ್ಲ.