ರಾಯಚೂರು, ಫೆ.21- ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರ ಆರ್‌ಟಿಪಿಎಸ್‌ನಲ್ಲಿ 5 ಘಟಕಗಳು ಸ್ಥಗಿತಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತೆ ವಿದ್ಯುತ್ ಕ್ಷಾಮದ ಬಿಸಿ ಜನತೆಗೆ ತಟ್ಟುವ ಸಾಧ್ಯತೆ ಇದೆ. ನಗರ ಪ್ರದೇಶಗಳಲ್ಲಿ ಸದ್ಯದಲ್ಲಿಯೇ ಲೋಡ್‌ಶೆಡ್ಡಿಂಗ್ ಜಾರಿಗೊಳ್ಳುವ ಆತಂಕ ಶುರುವಾಗಿದೆ. ಪ್ರಸ್ತುತ ದಿನೇ ದಿನೇ ವಿದ್ಯುತ್ ಬೇಡಿಕೆ ಹೆಚ್ಚಾಗಿರುವುದರಿಂದ ಅದನ್ನು ಸರಿದೂಗಿಸಲು ಇಂಧನ ಸಚಿವಾಲಯ ಹೆಣಗಾಡುತ್ತಿದೆ. ಈಗಾಗಲೇ ದುಬಾರಿ ಬೆಲೆ ತೆತ್ತು ವಿದ್ಯುತ್ ಖರೀದಿ ಮಾಡುತ್ತಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ಪ್ರಸ್ತುತ ಆರ್‌ಟಿಪಿಎಸ್‌ನಿಂದ ರಾಜ್ಯದ ಬಹುತೇಕ ನಗರ ಪ್ರದೇಶಗಳಿಗೆ ವಿದ್ಯುತ್ ಹರಿದು ಬರುತ್ತಿದ್ದು , ಇದಲ್ಲದೆ ಶರಾವತಿ ವಿದ್ಯುತ್ ಕೇಂದ್ರದಿಂದಲೂ ಕಾರ್ಖಾನೆಗಳಿಗೆ ವಿದ್ಯುತ್ ಸರಬರಾಜು ಸಂಪರ್ಕಿಸಲಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಆರ್‌ಟಿಪಿಎಸ್‌ನಲ್ಲಿ ತಾಂತ್ರಿಕ ದೋಷ ನೀರಿನ ಅಭಾವ ತಲೆದೋರಿರುವುದರಿಂದ ಒಂದೊಂದೇ ಘಟಕಗಳು ಕಾರ್ಯ ಸ್ಥಗಿತಗೊಳಿಸುತ್ತಿದೆ. ಇದಲ್ಲದೆ ಶರಾವತಿಯ ವಿದ್ಯುತ್ ಕೇಂದ್ರದಲ್ಲಿ ಮೊನ್ನೆಯಷ್ಟೇ ಬೆಂಕಿ ಅವಘಡ ಸಂಭವಿಸಿರುವುದರಿಂದ ಕೆಲ ಉಪಕರಣಗಳು ಕೆಟ್ಟು ಹೋಗಿದ್ದು , ಅದನ್ನು ಬದಲಿಸುವ ಕಾರ್ಯ ನಡೆಯುತ್ತಿದೆ.
ಇವಲ್ಲದರ ನಡುವೆ ತುರ್ತು ಸಭೆ ನಡೆಸಿರುವ ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳು (ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ ಇತ್ಯಾದಿ) ರಾಜ್ಯ ಸರ್ಕಾರಕ್ಕೆ ವಿದ್ಯುತ್ ಅಭಾವದ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ. ಇನ್ನೊಂದೆರಡು ಮೂರು ದಿನಗಳಲ್ಲಿ ರಾಜ್ಯದೆಲ್ಲೆಡೆ ಮತ್ತೆ ಲೋಡ್ ಶೆಡ್ಡಿಂಗ್ ಆರಂಭಿಸುವ ಕುರಿತು ಚಿಂತನೆ ಕೂಡ ನಡೆದಿದೆ.ಈಗಾಗಲೇ ಮಾರ್ಚ್‌ನಲ್ಲಿ ಪರೀಕ್ಷೆಗಳು ಆರಂಭಗೊಳ್ಳುತ್ತಿರುವುದರಿಂದ ವಿದ್ಯಾರ್ಥಿ ಸಮುದಾಯದಲ್ಲಿ ಒಂದು ರೀತಿಯ ಆತಂಕವಾದರೆ ಸಾರ್ವಜನಿಕರಿಗೆ ಬೇಸಿಗೆಯ ಬೇಗೆಯ ಬಿಸಿ ತಟ್ಟಲಿದೆ.