ನೆಲಮಂಗಲ: ಪಾದಚಾರಿಗಳ ಮೇಲೆ ಕಾರು ಹರಿದು ಮೂವರು ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕಳೆದ ರಾತ್ರಿ ಈ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೋಲೂರಿನ ಅಂಚೆಪಾಳ್ಯದ ಬಳಿ ಕಳೆದ ರಾತ್ರಿ ಕಾರು ಚಾಲಕನೊಬ್ಬನ ನಿರ್ಲಕ್ಷ್ಯಕ್ಕೆ ಮೂರು ಜೀವಗಳು ಬಲಿಯಾಗಿವೆ. ನೆಲಮಂಗಲದ ಒಂದೇ ಕುಟುಂಬದ ಏಳು ಮಂದಿ ಸುಬ್ರಮಣ್ಯ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಾಸಾಗ್ತಿದ್ರು. ಬರುವಾಗ ಅಂಚೆಪಾಳ್ಯದ ಡಾಬಾದಲ್ಲಿ ಊಟ ಮುಗಿಸಿ ಇನ್ನೇನು ಹೊರಡಲು ಅಣಿಯಾಗಿದ್ದರು. ಅಷ್ಟರಲ್ಲಿ ವೇಗವಾಗಿ ಬಂದ ಡಸ್ಟರ್ ಕಾರೊಂದು ಮೂವರ ಮೇಲೆ ಹರಿದುಹೋಯ್ತು. ದುರ್ಘಟನೆಯಲ್ಲಿ ನೆಲಮಂಗಲದ ಕುದುರಗೆರೆ ಕಾಲೋನಿಯ ರೇಣುಕಪ್ಪ, ಗಂಗಮ್ಮ ಹಾಗೂ ಸರೋಜಮ್ಮ ಎಂಬವರು ಸಾವನ್ನಪ್ಪಿದ್ದಾರೆ.
ಮೂವರನ್ನ ಬಲಿ ಪಡೆದ ಡಸ್ಟರ್ ಕಾರ್, ತಕ್ಷಣ ಸ್ಥಳದಿಂದ ಪರಾರಿಯಾಗಿದೆ. ಮಾಗಡಿಯ ಕುದೂರು ಪೊಲೀಸರು ಡಾಬಾದಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದ್ದು, ಕಾರಿನ ಬಗ್ಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಸದ್ಯ ಕಾರು ಚಾಲಕನ ಪತ್ತೆಗಾಗಿ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಹಿಟ್ ಆಂಡ್ ರನ್‍ಗೆ ಬಲಿಯಾದ ಮೂವರ ಮೃತದೇಹ ನೆಲಮಂಗಲದ ಶವಾಗಾರದಲ್ಲಿದೆ.