ಬೆಂಗಳೂರು: ಇದೇ ಮೊದಲ ಬಾರಿ ನೈಋತ್ಯ ರೇಲ್ವೇ ವಿಭಾಗ, ರೈಲ್ವೇ ಪ್ರಯಾಣಿಕರು ಮತ್ತು ಪ್ರಯಾಣಿಕರ ಇನ್ನಿತರ ಸಂಘಟನೆಗಳು ಸೇರಿ ಮುಂಬರುವ ಕೇಂದ್ರ ರೈಲ್ವೇ ಬಜೆಟ್‌ಗೆ ತಮ್ಮ ವಿಶ್ ಲಿಸ್ಟ್ ಕಳುಹಿಸಿಕೊಟ್ಟಿದ್ದಾರೆ.
ಕೇಂದ್ರ ರೈಲ್ವೇ ಬಜೆಟ್ ಮಂಡನೆಯ ಮುನ್ನ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಅಭಿಪ್ರಾಯ ಮತ್ತು ವಿಶ್ ಲಿಸ್ಟ್ ಗಳನ್ನು ಕಳುಹಿಸುವುದು ಸರ್ವೇ ಸಾಮಾನ್ಯ. ಆದರೆ ಈ ವರ್ಷ ರೈಲ್ವೇ ಪ್ರಯಾಣಿಕರ ಅಭಿಪ್ರಾಯವನ್ನೂ ಪರಿಗಣಿಸಲು ಕೇಂದ್ರ ರೈಲ್ವೇ ಸಚಿವಾಲಯ ನಿರ್ಧರಿಸಿದೆ.
ಶಾಸಕ, ಸಂಸದರ ಅಭಿಪ್ರಾಯಗಳೊಂದಿಗೆ ಈ ಬಾರಿ ಜನ ಸಾಮಾನ್ಯರ ಅಭಿಪ್ರಾಯವನ್ನೂ ರೈಲ್ವೇ ಇಲಾಖೆ ಪರಿಗಣಿಸಲಿದೆ ಎಂಬುದು ವಿಶೇಷ.
ಈಗಾಗಲೇ ಇಮೇಲ್ ಮೂಲಕ 200ಕ್ಕಿಂತಲೂ ಹೆಚ್ಚು ಅಭಿಪ್ರಾಯಗಳು ಜನರಿಂದ ಬಂದಿದೆ.ಈ ಅಭಿಪ್ರಾಯಗಳನ್ನೆಲ್ಲ ಕ್ರೋಢೀಕರಿಸಿ ಕೇಂದ್ರ ರೈಲ್ವೇ ಸಚಿವಾಲಯಕ್ಕೆ ಕಳುಹಿಸಲಾಗುವುದು ಎಂದು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಂಗಳೂರಿನ ಜನ ಏನಂತಾರೆ?
ಬೆಂಗಳೂರಿನಲ್ಲಿ ಸಬರ್‌ಬನ್ ರೇಲ್ವೇ ಸೇವೆ ಬೇಕು ಎಂದು ಬೆಂಗಳೂರಿನ ಜನತೆ ಆಗ್ರಹಿಸಿದೆ. ಜನರ ಈ ಆಗ್ರಹವನ್ನು ರೈಲ್ವೇ ಮಂಡಳಿಗೆ ಕಳುಹಿಸಿ ಕೊಟ್ಟಿದ್ದು, ಈ ಬಗ್ಗೆ ಸಚಿವರು ಈಗಾಗಲೇ ಘೋಷಣೆ ಮಾಡಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.
ಹೊಸ ಬೇಡಿಕೆಗಳೇನು?
ಗದಗ ಮೂಲಕ ಹುಬ್ಬಳ್ಳಿ -ದೆಹಲಿ ರೈಲು
ಹೊಸ ಎರಡು ರೈಲುಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಹುಬ್ಬಳ್ಳಿ ಮತ್ತು ಚೆನ್ನೈ ನಡುವೆ ವಾರದಲ್ಲಿರುವ ವಿಶೇಷ ರೈಲಿನ ಹೊರತಾಗಿ ದಿನ ನಿತ್ಯ ಓಡಾಡುವ ರೈಲು ಬೇಕೆಂಬುದು ಒಂದು ಬೇಡಿಕೆಯಾದರೆ, ಗದಗ ಮೂಲಕ ಹುಬ್ಬಳ್ಳಿ-ದೆಹಲಿಗೆ ರೈಲು ಬೇಕು ಎಂಬುದು ಇನ್ನೊಂದು ಬೇಡಿಕೆಯಾಗಿದೆ.
ಕೊಟ್ಟೂರು ಮತ್ತು ಹರಿಹರ, ಕಡೂರು ಮತ್ತು ಸಕಲೇಶಪುರ ( ಚಿಕ್ಕಮಗಳೂರು ದಾರಿಯಾಗಿ), ಚಿತ್ರದುರ್ಗ ಮೂಲಕ ತುಮಕೂರಿನಿಂದ ದಾವಣಗೆರೆ -ಹೀಗೆ ಹೊಸ ಮೂರು ರೈಲ್ವೇ ಮಾರ್ಗಗಳಿಗೂ ಬೇಡಿಕೆ ಸಲ್ಲಿಸಲಾಗಿದೆ. ಬಜೆಟ್‌ನಲ್ಲಿ ಈ ಬಗ್ಗೆ ಶಿಫಾರಸು ಮಾಡುವುದಕ್ಕಾಗಿ ನೈಋತ್ಯ ರೇಲ್ವೇಯ ಇಂಜಿನಿಯರಿಂಗ್ ವಿಭಾಗ ಈಗಾಗಲೇ ಪರಿಶೀಲನೆ ನಡೆಸಿ ವರದಿ ಕಳುಹಿಸಿದೆ.
ರೈಲ್ವೇ ಹಳಿ ವಿಸ್ತರಣೆ
ತಲಗುಪ್ಪ -ಹೊನ್ನಾವರ
ಗದಗ -ಹಾವೇರಿ
ವಿಜಯಪುರ- ಶಹಬಾದ್
ಆಲಮಟ್ಟಿ -ಕೊಪ್ಪಳ
ಕೊಟ್ಟೂರು -ಚಿತ್ರದುರ್ಗ
ಗದಗ -ವಾಡಿ
ಕೊಪ್ಪಳ -ಸಿಂಧನೂರು
ಯಾದಗಿರಿ -ಆಲಮಟ್ಟಿ
ಧಾರವಾಡ – ಬೈಲಹೊಂಗಲ – ಬೆಳಗಾವಿ
ಈ ಬಗ್ಗೆ ಅಭಿಪ್ರಾಯಗಳನ್ನು ಕಳುಹಿಸುವಂತೆ ನಮ್ಮಲ್ಲಿ ಯಾರೂ ಹೇಳಲಿಲ್ಲ. ಆದ್ದರಿಂದ ಈ ಬಾರಿ ಬಜೆಟ್‌ನಲ್ಲಿ ಏನು ಘೋಷಣೆ ಮಾಡುತ್ತಾರೆ ಎಂಬುದು ನಮಗೆ ಗೊತ್ತಿಲ್ಲ ಎಂದು ಡಿವಿಷನಲ್ ರೈಲ್ವೇ ಮ್ಯಾನೇಜರ್ ಸಂಜಯ್ ಅಗರ್‌ವಾಲ್ ಹೇಳಿದ್ದಾರೆ.
ಏತನ್ಮಧ್ಯೆ, ಈ ಬಾರಿ ರೈಲ್ವೇ ಬಜೆಟ್‌ನಲ್ಲಿ ಉತ್ತಮವಾದ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ರೈತರಿಗೆ, ವಿದ್ಯಾರ್ಥಿಗಳಿಗೆ, ಎಸ್ಸಿ ಎಸ್ಟಿ ಸಮುದಾಯದವರಿಗೆ ವಿನಾಯಿತಿ ಸಿಗುವ ಯೋಜನೆಗಳು ಈ ಬಜೆಟ್‌ನಲ್ಲಿರುವ ಸಾಧ್ಯತೆ ಇದೆ ಎಂದು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.