ಬೆಂಗಳೂರು: ಕತ್ತು ಕುಯ್ದು ಪತ್ನಿಯನ್ನು ಕೊಲೆಗೈದ ಬಿಎಂಟಿಸಿ ಚಾಲಕನೊಬ್ಬ, ನಂತರ ತಾನೇ ಮಡಿವಾಳ ಠಾಣೆಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಮದೀನಾನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಹಫೀಜಾ (35) ಕೊಲೆಯಾದವರು. ಆರೋಪಿ ಅಫ್ಜರ್‌ನನ್ನು (55) ಬಂಧಿಸಲಾಗಿದೆ. ಮೊದಲ ಪತ್ನಿ ಮತ್ತು ನಾಲ್ವರು ಮಕ್ಕಳಿಂದ ದೂರವಾಗಿದ್ದ ಅಫ್ಜರ್, ಒಂದೂವರೆ ವರ್ಷದ ಹಿಂದೆ ಹಫೀಜಾ ಅವರನ್ನು ವಿವಾಹವಾಗಿದ್ದ. ಈಗ ಶೀಲ ಶಂಕಿಸಿ ಅವರನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಟೊ ಚಾಲಕನ ಜತೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸಿದ್ದ ಆರೋಪಿ, ಆಗಾಗ ಜಗಳವಾಡುತ್ತಿದ್ದ. ಇದೇ ವಿಷಯಕ್ಕಾಗಿ ದಂಪತಿ ಮಧ್ಯೆ ರಾತ್ರಿ 11ರ ಸುಮಾರಿಗೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ.
ಆಗ ದೊಣ್ಣೆಯಿಂದ ಪತ್ನಿ ತಲೆಗೆ ಹೊಡೆದ ಆತ, ಪ್ರಜ್ಞೆ ತಪ್ಪಿದ್ದ ಅವರ ಕತ್ತು ಕುಯ್ದು ಹತ್ಯೆಗೈದು ಠಾಣೆಗೆ ಕರೆ ಮಾಡಿದ. ನಂತರ ಸ್ಥಳಕ್ಕೆ ತೆರಳಿ ಆತನನ್ನು ಬಂಧಿಸಲಾಯಿತು ಎಂದು ಮಡಿವಾಳ ಠಾಣೆ ಪೊಲೀಸರು ತಿಳಿಸಿದರು.