ಕರ್ನಾಟಕ

ರಾಜ್ಯದ 20 ಜೈಲಿಗೆ ಸಿಸಿಟೀವಿ ಅಳವಡಿಕೆ

Pinterest LinkedIn Tumblr

CC-Camera-600ಬೆಂಗಳೂರು: ಕಾರಾಗೃಹದಿಂದಲೇ ಅಪರಾಧ ಚಟುವಟಿಕೆ ನಡೆಸುವ ಹಾಗೂ ಕಾರಾಗೃಹಗಳಲ್ಲಿ ಗಾಂಜಾ, ಮಾದಕ ವಸ್ತುಗಳು ಸುಲಭವಾಗಿ ಲಭ್ಯವಾಗುತ್ತಿರುವ ಪ್ರಕರಣಗಳ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ರಾಜ್ಯದ 20 ಜಿಲ್ಲಾ ಕಾರಾಗೃಹಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ತೀರ್ಮಾನಿಸಿದೆ. ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಅಗತ್ಯವಿರುವ 17.44 ಕೋಟಿ ರೂ.ಗಳ ಬಿಡುಗಡೆಗೂ ಅನುಮೋದನೆ ನೀಡಲಾಗಿದೆ.

ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು, ಅಪರಾಧ ಕೃತ್ಯ ಎಸಗಿ ಕಾರಾಗೃಹದಲ್ಲಿರುವ ಕೈದಿಗಳು ಅಲ್ಲಿಂದಲೇ ಮೊಬೈಲ್‌ ದೂರವಾಣಿ ಬಳಕೆ ಮಾಡಿಕೊಂಡು ಹೊರಗಿನ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಸಾಕಷ್ಟು ವರದಿಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ನಿಗಮ: ರಾಜ್ಯದ ಬೋವಿ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಂಪುಟ ಅನುಮತಿ ನೀಡಿದೆ. ಇದರಿಂದಾಗಿ ರಾಜ್ಯದ ಪ್ರಬಲ ಸಮುದಾಯದ ಹೆಸರಿನಲ್ಲಿ ಮತ್ತೂಂದು ನಿಗಮ ಸ್ಥಾಪನೆಯಾಗಲಿದೆ.

ಅನ್ನಭಾಗ್ಯ ಯೋಜನೆಯಡಿ ವಿತರಿಸುವ ರಾಗಿ, ಜೋಳ, ಭತ್ತವನ್ನು ಬೆಂಬಲ ಬೆಲೆಯಡಿ ಖರೀದಿಸಲು ಸರ್ಕಾರದಿಂದ 220 ಕೋಟಿ ರೂ. ಆವರ್ತನಿಧಿ ಕೊಡುವ ಜತೆಗೆ 100 ಕೋಟಿ ರೂ. ಸಾಲ ಪಡೆಯಲು ಸರ್ಕಾರದ ಖಾತರಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ.

ಪಂಚಾಯತ್‌ ತಿದ್ದುಪಡಿ ಕಾಯ್ದೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಐದು ವರ್ಷ ಅಧಿಕಾರಾವಧಿ ಜತೆಗೆ ರಾಜ್ಯ ದರ್ಜೆ ಸಚಿವ ಸ್ಥಾನಮಾನ ನೀಡುವ ಪಂಚಾಯತ್‌ ರಾಜ್‌ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೂ ಸಂಪುಟ ಒಪ್ಪಿಗೆ ನೀಡಿದೆ. ಈ ಕಾಯ್ದೆ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾಗಿ ರಾಜ್ಯಪಾಲರ ಒಪ್ಪಿಗೆ ಪಡೆದಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಕಾರಣ ಜಾರಿಯಾಗಿರಲಿಲ್ಲ. ಮಂಗಳವಾರ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆಯ ಫ‌ಲಿತಾಂಶ ಹೊರಬಿದ್ದ ನಂತರ ಪಂಚಾಯತ್‌ ಕಾಯ್ದೆ ತಿದ್ದುಪಡಿ ಪ್ರಕಾರವೇ ಮುಂದಿನ ಪ್ರಕ್ರಿಯೆಗಳು ನಡೆಯಬೇಕಿರುವುದರಿಂದ ನೀತಿ ಸಂಹಿತೆ ಮುಗಿದ ತತ್ ಕ್ಷಣ ಕಾಯ್ದೆ ಜಾರಿಗೊಳಿಸಲು ಸಂಪುಟ ಒಪ್ಪಿಗೆ ನೀಡಿದೆ.

ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಎಂಟು ಸಣ್ಣ ನೀರಾವರಿ ಕೆರೆಗಳಿಗೆ ಸಂಖ್‌ ಲಿಫ್ಟ್ ಮೂಲಕ ಪ್ಯಾಕೇಜ್‌ 4ರ ಅಡಿಯಲ್ಲಿ ಭೀಮಾ ನದಿಯಿಂದ ನೀರು ತುಂಬಿಸುವ ಯೋಜನೆಯ 63.98 ಕೋಟಿ ರೂ. ಪರಿಷ್ಕೃತ ಅಂದಾಜು ಹಾಗೂ ಇದೇ ತಾಲೂಕಿನ 8 ಸಣ್ಣ ಕೆರೆಗಳಿಗೆ ಬುಯ್ನಾರ್‌ ಲಿಫ್ಟ್ ಮೂಲಕ ಪ್ಯಾಕೇಜ್‌ 6ರ ಅಡಿಯಲ್ಲಿ ಭೀಮಾ ನದಿಯಿಂದ ನೀರು ತುಂಬಿಸುವ ಯೋಜನೆಯ 68 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

37 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಡಿಜಿಟಲ್‌ ಗ್ರಂಥಾಲಯ ಸ್ಥಾಪನೆ, 1 ಸಾವಿರ ರೂ. ಲಂಚ ಪಡೆದು ಲೋಕಾಯುಕ್ತ ದಾಳಿಗೆ ಸಿಕ್ಕಿ ಬಿದ್ದಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಎಚ್‌.ಜಿ.ರಾಜಣ್ಣ ಅವರನ್ನು ಸೇವೆಯಿಂದ ವಜಾ ಮಾಡುವುದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಮತ್ತಷ್ಟು ಆರ್ಥಿಕ ಸೌಲಭ್ಯಗಳನ್ನು ನೀಡುವುದು, ಚಾಮರಾಜನಗರದ ಬದನಗುಪ್ಪೆ ಮತ್ತು ಯಾದಗಿರಿಯ ಕಡೇಚೂರು ಕೈಗಾರಿಕೆ ಪ್ರದೇಶಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮವಾಗಿ ತಲಾ 82 ಮತ್ತು 50 ಕೋಟಿ ರೂ. ಬಿಡುಗಡೆ ಮಾಡಲು, ಹಾವೇರಿ ತಾಲೂಕಿನಲ್ಲಿ 13.50 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣ ಮಾಡಲು, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ವತಿಯಿಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಯಲಗಳಲೆ ಗ್ರಾಮದಲ್ಲಿ 18 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕೈಗಾರಿಕೆ ವಸಹಾತು ಪ್ರಾರಂಭಿಸಲು ಅನುಮತಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
-ಉದಯವಾಣಿ

Write A Comment