ಬೆಂಗಳೂರು: ಕನ್ನಡದ ಬಹುತೇಕ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರು ಇಂದಿನದ್ದಲ್ಲ. ಹಿಂದಿನಿಂದಲೂ ಅದು ಕೇಳಿಬರುತ್ತಲೇ ಇದೆ. ಈಗ ಕನ್ನಡದ ‘ಭಲೇ ಜೋಡಿ’ ಮತ್ತು ‘ಆ್ಯಕ್ಟರ್’ ಚಿತ್ರಗಳಿಗೂ ಕೂಡ ಅಂಥದ್ದೇ ಅನ್ಯಾಯವಾದ ಆರೋಪ ಕೇಳಿಬಂದಿದೆ. ಈ ಕುರಿತಂತೆ ‘ಆ್ಯಕ್ಟರ್’ ಚಿತ್ರದ ನಿರ್ಮಾಪಕ ಕೆ.ಎಂ. ವೀರೇಶ್ ಮತ್ತು ‘ಭಲೇ ಜೋಡಿ’ ನಿರ್ಮಾಪಕ ಶೈಲೇಂದ್ರಬಾಬು ಹಾಗೂ ಇತರೆ ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಅದರನ್ವಯ ಸೋಮವಾರ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದು ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಮಂಗಳವಾರದಿಂದ ಮಲ್ಟಿಪ್ಲೆಕ್ಸ್‌ನಲ್ಲಿ ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವಂತೆ ಸೂಚಿಸಲಾಗಿದೆ.
ಈ ಕುರಿತು ‘ಉದಯವಾಣಿ’ ಜತೆ ಮಾತನಾಡಿದ ಸಾ.ರಾ.ಗೋವಿಂದು, ‘ಬುಕ್ ಮೈ ಶೋ ವೆಬ್‌ಸೈಟ್‌ನಲ್ಲಿ ಕನ್ನಡ ಸಿನಿಮಾಗಳು ಹೌಸ್‌ಫುಲ್ ಎಂದು ತೋರಿಸಲಾಗಿದೆ. ಆದರೆ, ಐನಾಕ್ಸ್ ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರಗಳು ಜನರಿಲ್ಲದೇ ಓಡುತ್ತಿವೆ. ಇದರ ಹಿಂದಿನ ಉದ್ದೇಶ ಏನು ಎಂಬುದು ಗೊತ್ತಿಲ್ಲ.
ಐನಾಕ್ಸ್ ಮತ್ತು ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರ ವೀಕ್ಷಿಸುವ ಬಹುತೇಕ ಪ್ರೇಕ್ಷಕರು, ಮೊದಲು ಬುಕ್ ಮೈ ಶೋ ವೀಕ್ಷಿಸುತ್ತಾರೆ. ಅಲ್ಲಿ ಹೌಸ್‌ಫುಲ್ ಎಂದು ಗೊತ್ತಾದರೆ, ಆ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಬರುವುದಾದರೂ ಹೇಗೆ? ಈಗಾಗಲೇ ಕನ್ನಡ ಚಿತ್ರಗಳನ್ನು ವೀಕ್ಷಿಸಲು ಜನರೇ ಇಲ್ಲ ಎಂಬ ನೆಪವೊಡ್ಡಿ ಕನ್ನಡ ಚಿತ್ರಗಳ ಪ್ರದರ್ಶನವನ್ನೇ ನಿಲ್ಲಿಸಲಾಗಿದೆ. ಹೀಗಾಗಿ ಕನ್ನಡದ ಬಹುತೇಕ ಚಿತ್ರಗಳಿಗೆ ಇದೇ ಸಮಸ್ಯೆ ಎದುರಾಗುತ್ತಿದೆ ಎಂದು ನಿರ್ಮಾಪಕರು ದೂರು ನೀಡಿದ್ದರು’ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ, ಕೂಡಲೇ ಐನಾಕ್ಸ್ ಹಾಗೂ ಮಲ್ಟಿಪ್ಲೆಕ್ಸ್ ಗೆ ಸಂಬಂಧಿಸಿದವರನ್ನು ಕರೆಯಿಸಿ, ಆ ಬಗ್ಗೆ ಮಂಡಳಿಯಲ್ಲಿ ಪದಾಧಿಕಾರಿಗಳ ಜತೆ ಸೇರಿ ಚರ್ಚೆ ನಡೆಸಲಾಗಿದೆ. ಸದ್ಯಕ್ಕೆ ಸಮಸ್ಯೆ ಇರುವುದು ನಿಜ. ಕನ್ನಡ ಚಿತ್ರಗಳಿಗೆ ಆದ್ಯತೆ ಕೊಡದಿದ್ದರೆ, ಮುಂದೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಮಂಗಳವಾರದಿಂದ (ಇಂದಿನಿಂದ) ಕನ್ನಡ ಚಿತ್ರಗಳ ಪ್ರದರ್ಶನವನ್ನು ಮುಂದುವರೆಸಬೇಕು ಎಂದು ಹೇಳಲಾಗಿದೆ. ಜತೆಗೆ ಪಿವಿಆರ್ ಹಾಗೂ ಐನಾಕ್ಸ್‌ನಲ್ಲಿ ಮುಂದೆ ಕನ್ನಡದ ಚಿತ್ರಗಳ ಪ್ರದರ್ಶನಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
-ಉದಯವಾಣಿ