ಕರ್ನಾಟಕ

‘ಇನ್‌ವೆಸ್ಟ್‌’ ಒಪ್ಪಂದಗಳಿಗೆ ಮೇ 15ರ ಗಡುವು: ದೇಶಪಾಂಡೆ

Pinterest LinkedIn Tumblr

Deshpande-R-V-650ಬೆಂಗಳೂರು: ಇನ್‌ವೆಸ್ಟ್‌ ಕರ್ನಾಟಕದಲ್ಲಿ ಮಾಡಿಕೊಂಡಿರುವ ಒಪ್ಪಂದಗಳ ಅನುಸಾರ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮೇ 15ರೊಳಗೆ ಅರ್ಜಿ ಸಲ್ಲಿಸದಿದ್ದರೆ ಅಂತಹ ಒಪ್ಪಂದಗಳನ್ನೇ ರದ್ದುಗೊಳಿಸಲಾಗುವುದು ಎಂದು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದ್ದಾರೆ.

ಮಾಸಾರಂಭದಲ್ಲಿ ಅರಮನೆ ಮೈದಾನದಲ್ಲಿ ನಡೆದ ಎರಡು ದಿನಗಳ ಇನ್‌ವೆಸ್ಟ್‌ ಕರ್ನಾಟಕ ಸಮಾವೇಶದಲ್ಲಿ 1.27 ಲಕ್ಷ ಕೋಟಿ ರೂ. ಮೊತ್ತದ 122 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಒಪ್ಪಂದಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ 200 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಗೆ ಸಂಬಂಧಿಸಿದಂತೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅವರು ಹೂಡಿಕೆದಾರರಿಗೆ ಬೇಕಾದ ಅನುಕೂಲಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಿದ್ದಾರೆ. ಅದರಂತೆ ಈ ಒಪ್ಪಂದಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಸ್ತಾವಗಳೊಂದಿಗೆ ಮೇ 15ರೊಳಗೆ ಅರ್ಜಿ ಸಲ್ಲಿಸದಿದ್ದಲ್ಲಿ ಒಪ್ಪಂದಗಳನ್ನೇ ರದ್ದುಗೊಳಿಸುವ ಕಠಿನ ನಿರ್ಧಾರಕ್ಕೆ ಸರಕಾರ ಬಂದಿದೆ ಎಂದು ತಿಳಿಸಿದ್ದಾರೆ.

ಕಾಲಮಿತಿಯೊಳಗೆ ಹೂಡಿಕೆ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಉದ್ಯಮಿಗಳಿಗೆ ರಾಜ್ಯದಲ್ಲಿ ಹೂಡಿಕೆಗೆ ಯಾವುದೇ ಸಮಸ್ಯೆಗಳಿಲ್ಲ ಎಂಬುದನ್ನು ತೋರಿಸಿಕೊಡುವುದರ ಜತೆಗೆ ಹೂಡಿಕೆದಾರರ ಸಮಾವೇಶ ಕೇವಲ ಒಪ್ಪಂದಗಳಿಗೆ ಸಹಿ ಹಾಕುವುದಕ್ಕೆ ಸೀಮಿತವಾಗಿಲ್ಲ. ಅನುಷ್ಠಾನಕ್ಕೂ ಕ್ರಮ ಕೈಗೊಳ್ಳಲು ಸರಕಾರ ಬದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸಲಾಗುತ್ತದೆ ಎಂದರು.

ಇನ್‌ವೆಸ್ಟ್‌ ಕರ್ನಾಟಕದಲ್ಲಿ 1.27 ಲಕ್ಷ ಕೋಟಿ ರೂ. ಹೂಡಿಕೆ ಒಪ್ಪಂದ ಮಾಡಿಕೊಂಡಿರುವುದರ ಜತೆಗೆ 2015-16ನೇ ಸಾಲಿನಲ್ಲಿ ಇದುವರೆಗೆ 3.04 ಲಕ್ಷ ಕೋಟಿ ರೂ. ಹೂಡಿಕೆ ಪ್ರಸ್ತಾವಗಳು ಬಂದಿವೆ ಎಂದರು.
-ಉದಯವಾಣಿ

Write A Comment