ಬೆಂಗಳೂರು, ಫೆ. ೨೩- ಹೈದರಾಬಾದ್- ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಿಜೆಪಿ ಪ್ರಾಬಲ್ಯ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಮುಂದುವರಿದಿದ್ದು, ಗುಲ್ಬರ್ಗಾ, ಬಿಜಾಪುರ, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದರೆ, ಬೀದರ್, ಯಾದಗೀರ್ ಹಾಗೂ ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಾಲಾಗಿದೆ. ರಾಯಚೂರು ಜಿ.ಪಂ. ನಲ್ಲಿ ಅತಂತ್ರ ಪರಿಸ್ಥಿತಿ ರೂಪುಗೊಂಡಿದೆ.
ಬಳ್ಳಾರಿಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೆಲಕಚ್ಚಿದ ಬಿಜೆಪಿ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಮತ್ತೆ ತಲೆ ಎತ್ತಿದ್ದು, ಅತ್ಯಧಿಕ ಸ್ಥಾನ ಪಡೆದು ಅಧಿಕಾರ ಹಿಡಿದಿದೆ.
ಒಟ್ಟು 40 ಕ್ಷೇತ್ರಗಳ ಪೈಕಿ 21ರಲ್ಲಿ ಬಿಜೆಪಿ ಜಯಗಳಿಸಿದ್ದು, ಕಾಂಗ್ರೆಸ್ 17 ಸ್ಥಾನದಲ್ಲಿ ಜಯಗಳಿಸಿದೆ. ಪಕ್ಷೇತರರು 2 ಸ್ಥಾನದಲ್ಲಿ ಜಯಗಳಿಸಿದ್ದಾರೆ.
ಬಿಜಾಪುರದಲ್ಲಿ ಬಿಜೆಪಿ ಬಹುಮತ ಗಳಿಸಿದ್ದು, 40 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ 20ರಲ್ಲಿ ಜಯ ಸಾಧಿಸಿದ್ದು, ಕಾಂಗ್ರೆಸ್ 18 ಕ್ಷೇತ್ರಗಳಲ್ಲಿ ಗೆದ್ದಿದೆ.
ಬಾಗಲಕೋಟೆಯಲ್ಲೂ ಬಿಜೆಪಿ ಅಧಿಕಾರ ಹಿಡಿದಿದ್ದು, 36 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿ ಗೆದ್ದಿದ್ದು, 17ರಲ್ಲಿ ಕಾಂಗ್ರೆಸ್ ಹಾಗೂ ಒಬ್ಬ ಪಕ್ಷೇತರರು ಗೆದ್ದಿದ್ದಾರೆ.
ಗುಲ್ಬರ್ಗಾದಲ್ಲಿ ಬಿಜೆಪಿ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದಿದೆ. ಒಟ್ಟು 47 ಜಿ.ಪಂ. ಕ್ಷೇತ್ರಗಳ ಪೈಕಿ 24ರಲ್ಲಿ ಬಿಜೆಪಿ ಗೆದ್ದಿದೆ. 21 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ.
ಕೊಪ್ಪಳದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿದ್ದು, ಯಾದಗೀರ್‌ನಲ್ಲೂ ಕಾಂಗ್ರೆಸ್ ಒಟ್ಟು 24 ಸ್ಥಾನಗಳ ಪೈಕಿ 12ರಲ್ಲಿ ಗೆದ್ದಿದೆ.
ಬೀದರ್‌ನಲ್ಲೂ ಕಾಂಗ್ರೆಸ್ ಒಟ್ಟು 34 ಸ್ಥಾನಗಳ ಪೈಕಿ 19ರಲ್ಲಿ ಗೆದ್ದು ಬಹುಮತ ಗಳಿಸಿ ಜಿ.ಪಂ. ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 11 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ.
ರಾಯಚೂರು ಕ್ಷೇತ್ರ ಅತಂತ್ರವಾಗಿದ್ದು, ಇಲ್ಲಿ ಬಿಜೆಪಿ ಒಟ್ಟು 36 ಕ್ಷೇತ್ರಗಳ ಪೈಕಿ 17ರಲ್ಲಿ ಜಯ ಸಾಧಿಸಿದ್ದು, ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ, ಜೆಡಿಎಸ್ 9 ಕ್ಷೇತ್ರದಲ್ಲಿ ಜಯಗಳಿಸಿದೆ. ಇಲ್ಲಿ ಯಾರೇ ಅಧಿಕಾರ ಹಿಡಿಯಬೇಕಾದರೆ ಜೆಡಿಎಸ್‌ನ ನೆರವು ಬೇಕು.