ಬೆಂಗಳೂರು, ಫೆ. ೨೩- ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರ ಕಾರ್ಯಕ್ಷೇತ್ರ ರಾಮನಗರದಲ್ಲಿ ಜೆ.ಡಿ.ಎಸ್ ನೆಲ ಕಚ್ಚಿದ್ದು, ಇಲ್ಲಿ ಕಾಂಗ್ರೆಸ್ ಪಕ್ಷ ಜಿ.ಪಂ ಅಧಿಕಾರ ಹಿಡಿಯುವ ಮೂಲಕ ಇಂಧನ ಸಚಿವ ಡಿ.ಕೆ. ಶಿವುಕುಮಾರ್ `ಕೈ’ ಮೇಲಾಗಿದೆ.
ಜಿಲ್ಲೆಯ 22 ಜಿ.ಪಂ ಕ್ಷೇತ್ರಗಳ ಪೈಕಿ 16 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಜೆಡಿಎಸ್ ಕೇವಲ 6 ಸ್ಥಾನ ಗಳಿಸಿದ್ದು, ಹೆಚ್.ಡಿ. ಕುಮಾರಸ್ವಾಮಿಯವರಿಗೆ ಮುಖಭಂಗವಾಗಿದೆ.
ಜಿಲ್ಲೆಯ ರಾಜಕಾರಣದ ಮೇಲೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಂದಿದ್ದ ಹಿಡಿತಕ್ಕೂ ಕೊನೆ ಹಾಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಜಿಲ್ಲೆಯನ್ನು ತಮ್ಮ ಹಿಡಿತಕ್ಕೂ ತೆಗೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜೆ.ಡಿ.ಎಸ್ ತನ್ನ ಪ್ರಭಾವ ಕಳೆದುಕೊಂಡಿದ್ದು, ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಹೋಗಿದೆ. ಇಲ್ಲಿ ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಸಮಬಲದ ಗೆಲವು ಪಡೆದಿವೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲದ ಹೋರಾಟ ನಡೆಸಿದ್ದು, ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದಿದೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕಾಂಗ್ರೆಸ್‌ಗೆ
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಎರಡು ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಪಕ್ಷದ ಪಾಲಾಗಿದ್ದು, ಕೋಲಾರದಲ್ಲಿ ಕಾಂಗ್ರೆಸ್ ಪ್ರಯಾಸದ ಗೆಲುವು ಸಾಧಿಸಿದೆ. ಒಟ್ಟು 30 ಸ್ಥಾನಗಳ ಪೈಕಿ 15ರಲ್ಲಿ ಗೆಲುವು ಸಾಧಿಸಿ ಗೆಲುವಿನ ನಿಟ್ಟುಸಿರು ಬಿಟ್ಟಿದೆ.
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು, ಬಿಜೆಪಿ ಹಾಗೂ ಜೆ.ಡಿ.ಎಸ್ ಪಕ್ಷಗಳಿಗೆ ಹಿನ್ನಡೆಯಾಗಿದೆ.
ತುಮಕೂರಿನಲ್ಲಿ ಅತಂತ್ರ ಜಿಲ್ಲಾ ಪಂಚಾಯತ್ ನಿರ್ಮಾಣವಾಗಿದ್ದು, ಜೆ.ಡಿ.ಎಸ್ ಭದ್ರಕೋಟೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಲಗ್ಗೆ ಹಾಕಿದ್ದು, ಜೆ.ಡಿ.ಎಸ್ ಮೂರನೇ ಸ್ಥಾನಕ್ಕೆ ಹೋಗಿದೆ.
ಶಿವಮೊಗ್ಗ ಬಿಜೆಪಿ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಜಿಲ್ಲೆಯಲ್ಲಿ ಬಿಜೆಪಿ ಬಹುಮತ ಪಡೆದಿದ್ದು, ಕಾಂಗ್ರೆಸ್ ಪಕ್ಷದ ಪೈಪೋಟಿ ನಡುವೆಯೇ ಜಿ.ಪಂ. ಅಧಿಕಾರ ಬಿಜೆಪಿ ಪಾಲಾಗಿದೆ.
ಇಲ್ಲಿ ಜೆಡಿಎಸ್ ಸಹ ಹೆಚ್ಚಿನ ಸ್ಥಾನ ಗಳಿಸಿದೆ.