ಬೆಂಗಳೂರು: ಲೋಕಾ ಹಗರಣದಿಂದ ಲೋಕಾಯುಕ್ತ ಹುದ್ದೆ ಕಳೆದುಕೊಂಡಿರುವ ನ್ಯಾ. ಡಾ. ವೈ. ಭಾಸ್ಕರರಾವ್ಗೆ ಮತ್ತಷ್ಟು ಕಂಟಕ ಎದುರಾಗುವ ಲಕ್ಷಣ ಗೋಚರಿಸಿದೆ.
ಹಗರಣ ಸಂಬಂಧ ಮೊದಲ ಪ್ರಕರಣದಲ್ಲಿ (56/2015) ಭಾಸ್ಕರರಾವ್ ಅವರನ್ನು ಆರೋಪಿಯನ್ನಾಗಿ ಮಾಡಲು ಅವಕಾಶ ನೀಡುವಂತೆ ವಿಶೇಷ ತನಿಖಾ ತಂಡ ಫೆ. 10ರಂದು ಸರ್ಕಾರಕ್ಕೆ ಪತ್ರ ಬರೆದಿತ್ತು. ಎಸ್ಐಟಿ ಪತ್ರ ಉಲ್ಲೇಖಿಸಿ ರಾಜ್ಯ ಸರ್ಕಾರ ಮಂಗಳವಾರ (ಫೆ.23) ರಾಜ್ಯಪಾಲರಿಗೆ ಪತ್ರ ಬರೆದಿದೆ.
ಭಾಸ್ಕರರಾವ್ ಹೇಳಿಕೆ ಆಧರಿಸಿ (58/2015) ಇಂಜಿನಿಯರ್ ಚನ್ನಬಸಪ್ಪ ಪ್ರಕರಣದಲ್ಲಿ ಸಾಕ್ಷಿ ಯನ್ನಾಗಿ ಪರಿಗಣಿಸಲಾಗಿತ್ತು. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಎಂ. ಎನ್. ಕೃಷ್ಣಮೂರ್ತಿ ಅವರ ದೂರಿಗೆ ಸಂಬಂಧಪಟ್ಟಂತೆ ಎಸ್ಐಟಿ ದಾಖಲಿಸಿರುವ (56/2015) ಪ್ರಕರಣ ದಲ್ಲಿ ಭಾಸ್ಕರರಾವ್ ಪಾತ್ರ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಭಾಸ್ಕರರಾವ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಸಿಆರ್ಪಿಸಿ ಸೆಕ್ಷನ್ 197ರ ಅಡಿ ಸರ್ಕಾರದ ಅನುಮತಿ ಅಗತ್ಯ. ಆದ್ದರಿಂದ ಅನುಮತಿ ಕೋರಿ ಫೆ. 10ರಂದು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಎಸ್ಐಟಿ ಮುಖ್ಯಸ್ಥ ಕಮಲಪಂತ್ ವಿಜಯವಾಣಿಗೆ ತಿಳಿಸಿದ್ದಾರೆ.
ಭಾಸ್ಕರರಾವ್ ಪಾತ್ರವೇನು?: ಲೋಕಾಯುಕ್ತ ಸಂಸ್ಥೆಗೆ ಕರೆಸಿಕೊಂಡು 1 ಕೋಟಿ ರೂ. ಬೇಡಿಕೆ ಇಟ್ಟಿರುವ ಇಂಜಿನಿಯರ್ ಕೃಷ್ಣಮೂರ್ತಿ ಪ್ರಕರಣದಲ್ಲಿ ಭಾಸ್ಕರರಾವ್ ಅವರ ಪಾತ್ರ ಇರುವುದು ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ. ಲೋಕಾಯುಕ್ತರಿಗೆ ಈ ಬಗ್ಗೆ ಅರಿವು ಇರುವುದಕ್ಕೆ ಪೂರಕ ಸಾಕ್ಷಾಧಾರಗಳನ್ನು ಸಂಗ್ರಹ ಮಾಡಿರುವ ವಿಶೇಷ ತನಿಖಾ ತಂಡ ಮೊದಲ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲು ತಯಾರಿ ನಡೆಸಿದೆ.
ಭ್ರಷ್ಟಾಚಾರ ಆರೋಪ ಹೊರಿಸಿ ಲೋಕಾಯುಕ್ತ ಕಚೇರಿಗೆ ಕರೆಸಿಕೊಂಡು 1 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಇಂಜಿನಿಯರ್ ಕೃಷ್ಣಮೂರ್ತಿ ದೂರು ನೀಡಿದ್ದರು. ಆ ಸಂಬಂಧ ಕ್ರಮ ಜರುಗಿಸುವಂತೆ ಕೋರಲು 2015 ರ ಮೇ 12 ರಂದು ಲೋಕಾಯುಕ್ತದ ಅಂದಿನ ಎಸ್ಪಿ ಸೋನಿಯಾ ನಾರಂಗ್ ಲೋಕಾಯುಕ್ತರಿಗೆ ವರದಿ ನೀಡಿದ್ದರು. ಇದರಲ್ಲಿ ಭಾಸ್ಕರರಾವ್ ಅವರ ಪುತ್ರ ಅಶ್ವಿನ್ರಾವ್ ಹೆಸರು ಕೇಳಿ ಬಂದಿತ್ತು. ಇದಾದ ಬಳಿಕ ನಾನಾ ಬೆಳವಣಿಗೆ ನಡೆದು ಅಂತಿಮವಾಗಿ ವಿಶೇಷ ತನಿಖಾ ತಂಡವನ್ನು ಸರ್ಕಾರ ರಚಿಸಿತ್ತು.
ಅಶ್ವಿನ್ರಾವ್, ಲೋಕಾಯುಕ್ತ ಪಿಆರ್ಒ ಸಯ್ಯದ್ ರಿಯಾಜ್, ಪತ್ರಕರ್ತ ಶ್ರೀನಿವಾಸಗೌಡ, ಆರ್ಟಿಐ ಕಾರ್ಯಕರ್ತ ವಿ. ಭಾಸ್ಕರ್, ನರಸಿಂಹಮೂರ್ತಿ, ಶಂಕರೇಗೌಡ, ಅಶೋಕ್ಕುಮಾರ್ ಮತ್ತಿತರರು ಬಂಧನಕ್ಕೆ ಒಳಗಾಗಿದ್ದರು. ಇದಾದ ಬಳಿಕ ರಜೆ ಮೇಲೆ ತೆರಳಿದ್ದ ಭಾಸ್ಕರರಾವ್ ಅವರನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಿ, ಅಂತಿಮವಾಗಿ ಇಂಜಿನಿಯರ್ ಚನ್ನಬಸಪ್ಪ ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಪರಿಗಣಿಸಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ನಿವೃತ್ತ ಲೋಕಾಯುಕ್ತ ನ್ಯಾ. ಡಾ. ವೈ. ಭಾಸ್ಕರರಾವ್ ಅವರನ್ನು ಆರೋಪಿಯನ್ನಾಗಿಸಿ ದೋಷಾರೋಪ ಪಟ್ಟಿ ಸಲ್ಲಿಸಲು ಸೆಕ್ಷನ್ 19ರಡಿ ಅನುಮತಿ ಅಗತ್ಯವಿಲ್ಲ. ಭಾಸ್ಕರರಾವ್ ಅವರನ್ನು ವಿಚಾರಣೆಗೆ ಒಳಪಡಿಸಿ ಈಗಾಗಲೇ 1ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ಈಗ ಬೇರೆ ಪ್ರಕರಣದಲ್ಲಿ ಆರೋಪಿಯನ್ನಾಗಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಎಸ್ಐಟಿ ತನಿಖಾಧಿಕಾರಿಗಳೇ ಉತ್ತರ ನೀಡಬೇಕು.
ಸಿ.ಜಿ. ಸುಂದರ್ ಹಿರಿಯ ವಕೀಲ