ಬೆಂಗಳೂರು: ನಟ ದರ್ಶನ್ ದಂಪತಿಯ ಕೌಟುಂಬಿಕ ಕಲಹವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಿರುವ ಹಿರಿಯ ನಟ ಅಂಬರೀಷ್, ಶುಕ್ರವಾರ ಇಬ್ಬರಿಗೂ ಕರೆ ಮಾಡಿ ಬುದ್ಧಿವಾದ ಹೇಳಿದ್ದಾರೆ.
ಇದರ ನಂತರ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ತಣ್ಣಗಾಗಿದ್ದಾರೆ. ಮೈಸೂರಿನಲ್ಲಿ ಉಳಿದುಕೊಂಡಿರುವ ದರ್ಶನ್ ಕೂಡ, ಶನಿವಾರ ನಗರಕ್ಕೆ ಬಂದು ಮುಖಾಮುಖಿ ಮಾತನಾಡುವುದಾಗಿ ಅಂಬರೀಷ್ ಅವರಿಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಂಬರೀಷ್, ‘ಗಲಾಟೆ ಮಾಡಿಕೊಳ್ಳಬೇಡಿ ಎಂದಿದ್ದೇನೆ. ಜತೆಗೆ, ಮಾಧ್ಯಮಗಳ ಮುಂದೆ ಆರೋಪ–ಪ್ರತ್ಯಾರೋಪ ಮಾಡಿಕೊಳ್ಳದೆ ಮೌನವಾಗಿರುವಂತೆ ಸೂಚಿಸಿದ್ದೇನೆ. ಅದಕ್ಕೆ ಇಬ್ಬರೂ ಒಪ್ಪಿಕೊಂಡಿದ್ದಾರೆ. ಸತಿ–ಪತಿಗೆ ಕೂರಿಸಿ ಬುದ್ಧಿ ಹೇಳುತ್ತೇನೆ’ ಎಂದರು.
ಮೈಸೂರಿನಲ್ಲಿ ದರ್ಶನ್: ಕೌಟುಂಬಿಕ ಕಲಹ ಬೀದಿಗೆ ಬರುತ್ತಿದ್ದಂತೆಯೇ ಗುರುವಾರ ಮೈಸೂರಿಗೆ ತೆರಳಿದ್ದ ದರ್ಶನ್, ನಂಜನಗೂಡು ತಾಲ್ಲೂಕಿನಲ್ಲಿರುವ ತಮ್ಮ ತೋಟದ ಮನೆಯಲ್ಲಿ ಉಳಿದುಕೊಂಡಿದ್ದರು. ಶುಕ್ರವಾರ ಬೆಳಿಗ್ಗೆ ವಿಧಾನ ಪರಿಷತ್‌ನ ಜೆಡಿಎಸ್ ಸದಸ್ಯ ಸಂದೇಶ್ ನಾಗರಾಜ್ ಮನೆಗೆ ಹೋಗಿ ಅಲ್ಲೇ ಉಪಾಹಾರ ಮುಗಿಸಿದರು. ಅಲ್ಲಿಂದ ನೇರವಾಗಿ ಸಂದೇಶ್ ಒಡೆತನದ ‘ಸಂದೇಶ್ ಪ್ರಿನ್ಸ್’ ಹೋಟೆಲ್‌ಗೆ ತೆರಳಿದರು.
ಆಡಿಯೊ ವಿವಾದ: ಪೊಲೀಸರಿಗೆ ದೂರು ಕೊಟ್ಟಿರುವುದಕ್ಕಾಗಿ ದರ್ಶನ್ ಅವರು ಪತ್ನಿಗೆ ಅಶ್ಲೀಲವಾಗಿ ಬೈದಿದ್ದಾರೆ ಎನ್ನಲಾದ ಧ್ವನಿಮುದ್ರಿಕೆಯೊಂದು ಬಹಿರಂಗಗೊಂಡು ತೀವ್ರ ಚರ್ಚೆಗೆ ಗ್ರಾಸವಾಯಿತು. ಆದರೆ ಇದರಲ್ಲಿ ಇರುವುದು ದರ್ಶನ್ ದನಿ ಅಲ್ಲ ಎಂದು ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.
ನೋಟಿಸ್: ದರ್ಶನ್ ಅವರಿಗೆ ಶನಿವಾರ ವಿಚಾರಣೆಗೆ ಬರುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.