ಕರ್ನಾಟಕ

ಮೀನುಗಳ ಸಾವಿಗೆ ಆಮ್ಲಜನಕ ಕೊರತೆ ಕಾರಣ ! ಅಶೋಕ ಪರಿಸರ ಸಂಶೋಧನಾ ಸಂಸ್ಥೆಯ ಅಧ್ಯಯನದಿಂದ ಬಹಿರಂಗ

Pinterest LinkedIn Tumblr

meeeeenu

ಬೆಂಗಳೂರು: ಹಲಸೂರು ಕೆರೆಯಲ್ಲಿ ಮೀನುಗಳ ಸಾವಿಗೆ ಕೆರೆಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿರುವುದೇ ಕಾರಣ ಎಂಬ ಸಂಗತಿ ಅಶೋಕ ಪರಿಸರ ಸಂಶೋಧನಾ ಟ್ರಸ್ಟ್‌ನ (ಏಟ್ರೀ) ಅಧ್ಯಯನದಿಂದ ಬೆಳಕಿಗೆ ಬಂದಿದೆ.

‘ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಕೆರೆಯಲ್ಲಿ ಪ್ರತಿ ಲೀಟರ್‌ ನೀರಿನಲ್ಲಿ ಕನಿಷ್ಠ 4 ಮಿ.ಗ್ರಾಂ, ಗರಿಷ್ಠ 6.5 ಮಿ.ಗ್ರಾಂ ಆಮ್ಲಜನಕ ಇರಬೇಕು. ಆದರೆ ಕೆರೆಯ ನೀರನ್ನು ಪರೀಕ್ಷಿಸಿದಾಗ ಅದು ಕಡಿಮೆ ಇರುವುದು ಗೊತ್ತಾಯಿತು’ ಎಂದು ಏಟ್ರೀ ಸಂಸ್ಥೆಯ ಹಿರಿಯ ಸಂಶೋಧಕ ಶರತ್‌ಚಂದ್ರ ಲೇಲೆ ಹೇಳಿದರು.

‘ಕೆರೆಯಲ್ಲಿ ಮೂರು ಭಾಗದ ನೀರನ್ನು ಪರೀಕ್ಷೆ ಮಾಡಲಾಯಿತು. ಮೀನುಗಳು ಸತ್ತುಬಿದ್ದಿದ್ದ ಸ್ಥಳದಲ್ಲಿ 0.8, ಕೋಡಿಯಿಂದ ನೀರು ಹೋಗುವ ಸ್ಥಳದಲ್ಲಿ 0.3 ಮತ್ತು ರಾಜಕಾಲುವೆಯಿಂದ ನೀರು ಬಂದು ಸೇರುವ ಕಡೆ 1.5 ಮಿ.ಗ್ರಾಂ ಆಮ್ಲಜನಕ ಇರುವುದು ಪತ್ತೆಯಾಯಿತು’ ಎಂದರು.

‘ಅಲ್ಲದೇ, ನೀರಿನಲ್ಲಿ ಅಮೋನಿಯಾ ಪ್ರಮಾಣ ಹೆಚ್ಚಿರುವುದು ಸಹ ಮೀನುಗಳ ಸಾವಿಗೆ ಕಾರಣವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ನೀರಿನಲ್ಲಿ ಪ್ರತಿ ಲೀಟರ್‌ ನೀರಿಗೆ ಗರಿಷ್ಠ 1.2 ಮಿ.ಗ್ರಾಂ ಅಮೋನಿಯಂ ಇರಬೇಕು. ಆದರೆ, ಕೆರೆಯಲ್ಲಿ 1.7 ರಿಂದ 8 ಮಿ.ಗ್ರಾಂ ಇದೆ’ ಎಂದರು.

‘ಕೆರೆಗೆ ಕೊಳಚೆ ನೀರು ಸೇರುತ್ತಿದೆ. ಇದರಿಂದಾಗಿ ನೀರಿನಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ ನೀರಿನಲ್ಲಿ ಆಮ್ಲಜನಕ ಕಡಿಮೆಯಾಗುವ ಜತೆಗೆ, ಅಮೋನಿಯಾ ಪ್ರಮಾಣ ಹೆಚ್ಚಾಗಿದೆ’ ಎಂದು ಹೇಳಿದರು.

‘ಕೆರೆಯಲ್ಲಿ ‘ಫೀಕಲ್ ಕೋಲಿಫಾರ್ಮ್’ ಎಂಬ ಬ್ಯಾಕ್ಟೀರಿಯಾ ಸಹ ಪತ್ತೆಯಾಗಿದೆ. ಕೆರೆಗೆ ಕಕ್ಕಸು ಸೇರಿದರೆ ಈ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ’ ಎಂದರು.

‘ಮೀನುಗಳು ಸಾವನ್ನಪ್ಪಲು ಇನ್ನೂ ಯಾವ ಅಂಶಗಳು ಕಾರಣ ಎಂಬ ಬಗ್ಗೆ ಇನ್ನೂ ಮೂರ್ನಾಲ್ಕು ಬಗೆಯ ಪರೀಕ್ಷೆ ನಡೆಸಬೇಕು. ಅದಕ್ಕೆ 5 ದಿನ ಕಾಲಾವಕಾಶ ಬೇಕು. ಅದು ಪೂರ್ಣಗೊಂಡ ಬಳಿಕ ವರದಿ ಸಿದ್ಧಪಡಿಸಿ ಅದನ್ನು ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ, ಬಿಬಿಎಂಪಿಗೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ಮಾಲಿನ್ಯ ನಿಯಂತ್ರಣ ಮಂಡಳಿಯು ನೀರಿನ ಪರೀಕ್ಷೆ ನಡೆಸುವಾಗ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಹೀಗೆ ವಿವಿಧ ವೇಳೆ ನೀರನ್ನು ಸಂಗ್ರಹಿಸಿ ಪರೀಕ್ಷಿಸಬೇಕು. ಆಗಮಾತ್ರ ನೀರಿನ ಮಾಲಿನ್ಯದ ಪ್ರಮಾಣ, ನೀರಿನಲ್ಲಿರುವ ಆಮ್ಲಜನಕ ಮತ್ತು ಅಮೋನಿಯಾ ಪ್ರಮಾಣ ನಿಖರವಾಗಿ ಗೊತ್ತಾಗುತ್ತದೆ’ ಎಂದರು.

ಹಲಸೂರು ಕೆರೆಗೆ ಕೊಳಚೆ ನೀರು ಉಪ ಲೋಕಾಯುಕ್ತಕ್ಕೆ ದೂರು
‘ಹಲಸೂರು ಕೆರೆಗೆ ಸುತ್ತಲಿನ ಪ್ರದೇಶಗಳ ಕೊಳಚೆ ನೀರು ಸೇರುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ 2015ರ ಮೇ 28ರಂದು ಉಪ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು’ ಎಂದು ಭಾವಸಾರ ಕ್ಷತ್ರಿಯ ಎಜುಕೇಷನಲ್ ಎನ್‌ಕರೇಜ್‌ಮೆಂಟ್‌ ಟ್ರಸ್ಟ್‌ನ ಸಂಸ್ಥಾಪಕ ಮುಂದೇವ್ ಪುಟಾಣೆ ಹೇಳಿದರು.

‘ಫ್ರೇಜರ್‌ಟೌನ್‌ನಿಂದ ಬರುವ ಕೊಳಚೆ ನೀರು ಆಸ್ಯೆ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನ ಬಳಿ ಹಲಸೂರು ಕೆರೆಗೆ ಸೇರುತ್ತಿತ್ತು. ಆ ಕೊಳಚೆ ನೀರನ್ನು ಸಂಸ್ಕರಿಸಿ ಮದ್ರಾಸ್‌ ಎಂಜಿನಿಯರ್ ಗ್ರೂಪ್‌ಗೆ ನೀಡಲಾಗುತ್ತಿತ್ತು. ಈಗ ಸಂಸ್ಕರಣಾ ಘಟಕ ಹಾಳಾಗಿರುವುದರಿಂದ ಕೊಳಚೆ ನೀರು ನೇರವಾಗಿ ಕೆರೆ ಸೇರುತ್ತಿದೆ’ ಎಂದರು. ‘ಈ ಸಂಬಂಧ ವರದಿ ನೀಡುವಂತೆ ಉಪ ಲೋಕಾಯುಕ್ತರು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಕೆರೆ) ಅವರಿಗೆ ಸೂಚಿಸಿದ್ದರು’ ಎಂದು ಹೇಳಿದರು.

‘2002ರಲ್ಲಿ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ₹ 10.75 ಕೋಟಿ ಬಿಡುಗಡೆ ಮಾಡಿದ್ದರು. ಅದರಲ್ಲಿ ಕೆರೆಗೆ ಕೊಳಚೆ ನೀರು ಸೇರದಂತೆ ಒಳಚರಂಡಿ ಮಾರ್ಗಗಳ ದುರಸ್ತಿಗೆ ₹ 2.75 ಕೋಟಿ ಮತ್ತು ₹ 8 ಕೋಟಿಯನ್ನು ಕೆರೆ ಪುನಶ್ಚೇತನಕ್ಕೆ ವೆಚ್ಚ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ವರದಿಯಲ್ಲಿ ನೀಡಿದ್ದಾರೆ.

Write A Comment