ಬೆಂಗಳೂರು: ಚರ್ಚ್‌ಸ್ಟ್ರೀಟ್‌ನಲ್ಲಿ ನಡೆದು ಹೋಗುತ್ತಿದ್ದ ಯುವತಿಗೆ ಬೈಕ್‌ನಲ್ಲಿ ಕೂರುವಂತೆ ಪೀಡಿಸಿ, ಅವರ ಕೈ ಹಿಡಿದು ಎಳೆದಾಡಿದ್ದ ಎಲೆಕ್ಟ್ರಿಕಲ್ ಗುತ್ತಿಗೆದಾರನೊಬ್ಬ ಶುಕ್ರವಾರ ಕಬ್ಬನ್‌ಪಾರ್ಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಲಿಂಗರಾಜಪುರ ನಿವಾಸಿ ಜಾನ್ ಸಂಪತ್ ಕುಮಾರ್ (46) ಎಂಬಾತನನ್ನು ಬಂಧಿಸಲಾಗಿದೆ. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಚರ್ಚ್‌ಸ್ಟ್ರೀಟ್‌ಗೆ ಬಂದಿದ್ದ ಈತ, ಒಂಟಿಯಾಗಿ ಹೋಗುತ್ತಿದ್ದ 24 ವರ್ಷದ ಯುವತಿಯನ್ನು ತಡೆದು ಅನುಚಿತವಾಗಿ ವರ್ತಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಯುವತಿಗೆ ಬೈಕ್‌ನಲ್ಲಿ ಕುಳಿತುಕೊಳ್ಳುವಂತೆ ಬಲವಂತ ಮಾಡಿದ್ದ ಆರೋಪಿ, ಅವರ ಕೈ ಹಿಡಿದು ಎಳೆದಾಡಿದ್ದ. ಆತನಿಂದ ತಪ್ಪಿಸಿಕೊಂಡು ಯುವತಿ ಎಂ.ಜಿ. ರಸ್ತೆಗೆ ಬಂದಿದ್ದರು. ಹಿಂಬಾಲಿಸಿ ಅಲ್ಲಿಗೂ ಬಂದ ಆತ, ಮನೆಗೆ ಡ್ರಾಪ್ ಮಾಡುವುದಾಗಿ ಪೀಡಿಸಿದ್ದ. ಈ ವೇಳೆ ಸಂಚಾರ ಪೊಲೀಸರತ್ತ ಓಡಿದ ಯುವತಿ, ನಡೆದ ಘಟನೆಯನ್ನು ವಿವರಿಸಿದ್ದರು. ಆಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.
‘ಯುವತಿ ಬೈಕ್‌ನ ಮೂರು ನೋಂದಣಿ ಸಂಖ್ಯೆಗಳನ್ನು ಮಾತ್ರ ನೋಡಿಕೊಂಡಿದ್ದರು. ಸಾರಿಗೆ ಇಲಾಖೆ ನೆರವು ಪಡೆದು ಆ ಸಂಖ್ಯೆ ಹೊಂದಿರುವ ಎಲ್ಲ ಬೈಕ್‌ಗಳ ವಿವರಗಳನ್ನು ಪತ್ತೆ ಮಾಡಲಾಯಿತು. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ಚಹರೆಯನ್ನು, ಆ ಬೈಕ್‌ಗಳ ಮಾಲೀಕರ ಜತೆ ಹೋಲಿಕೆ ಮಾಡಿದಾಗ ಆರೋಪಿ ಸಿಕ್ಕಿ ಬಿದ್ದ’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಸಂಪತ್‌ನ ಮೊಬೈಲ್ ಗುರುವಾರ ರಾತ್ರಿ ಎಂ.ಜಿ.ರಸ್ತೆಯ ಟವರ್‌ಗಳಿಂದಲೇ ಸಂಪರ್ಕ ಪಡೆಯುತ್ತಿತ್ತು. ಸಂಪತ್‌ನ ಫೋಟೊ ತೋರಿಸಿದಾಗ ಯುವತಿ ಸಹ ಖಚಿತಪಡಿಸಿದರು. ಆರೋಪಿಯನ್ನು ಐಪಿಸಿ 354ರ ಅಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.