ಕರ್ನಾಟಕ

ಚರ್ಚೆಗೆ ಗ್ರಾಸವಾದ ನಟ ದರ್ಶನ್ ಪತ್ನಿಗೆ ಬೈದಿದ್ದಾರೆ ಎನ್ನಲಾದ ಧ್ವನಿಮುದ್ರಿಕೆ !

Pinterest LinkedIn Tumblr

Darshan

ಬೆಂಗಳೂರು: ತನ್ನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿರುವುದಕ್ಕಾಗಿ ನಟ ದರ್ಶನ್ ಅವರು ಪತ್ನಿಗೆ ಅಶ್ಲೀಲವಾಗಿ ಬೈದಿದ್ದಾರೆ ಎನ್ನಲಾದ ಧ್ವನಿಮುದ್ರಿಕೆಯೊಂದು ಶುಕ್ರವಾರ ಬಹಿರಂಗಗೊಂಡು ತೀವ್ರ ಚರ್ಚೆಗೆ ಗ್ರಾಸವಾಯಿತು.

‘ಅಪಾರ್ಟ್‌ಮೆಂಟ್‌ಗೆ ಬಂದರೆ ವಾಚ್‌ಮನ್‌ಗಳನ್ನು ಬಿಟ್ಟು ನನ್ನನ್ನು ತಡೆಯುತ್ತೀಯಾ. ಪೊಲೀಸರಿಗೆ ದೂರು ಕೊಟ್ಟಿದ್ದೀಯಾ. ಹೀಗೆ ಎಷ್ಟು ದಿನ ಮೆರೆಯುತ್ತೀಯಾ ಮೆರಿ’ ಎಂದು ದರ್ಶನ್ ಅವರು ಪತ್ನಿಗೆ ನಿಂದಿಸಿರುವಂತಿರುವ 40 ಸೆಕೆಂಡ್‌ಗಳ ಆ ಧ್ವನಿಮುದ್ರಿಕೆ ಶುಕ್ರವಾರ ವ್ಯಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿತು.

ವಾಹಿನಿಗಳಲ್ಲಿ ಪ್ರಸಾರವಾದ ಬಳಿಕ ಆ ಧ್ವನಿಮುದ್ರಿಕೆ ಮತ್ತಷ್ಟು ಕಾವು ಪಡೆದುಕೊಂಡಿತು.

ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ, ‘ಯಾರೋ ಕಿಡಿಗೇಡಿಗಳು ದರ್ಶನ್ ಅವರ ದನಿಯಲ್ಲಿ ನನ್ನ ಬಗ್ಗೆ ತುಂಬ ಕೆಟ್ಟ ಭಾಷೆಯಲ್ಲಿ ಮಾತನಾಡಿದ್ದಾರೆ. ಈ ಮೂಲಕ ನಮ್ಮ ಕುಟುಂಬಕ್ಕೆ ಧಕ್ಕೆ ತರುತ್ತಿದ್ದಾರೆ. 13 ವರ್ಷ ಅವರೊಂದಿಗೆ ಸಂಸಾರ ಮಾಡಿದ್ದೇನೆ. ಎಂದೂ ಅಂಥ ಪದಗಳನ್ನು ಬಳಸಿಲ್ಲ’ ಎಂದು ಪತಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಡಿಎನ್‌ಎಗೂ ಸಿದ್ಧ: ಮಗು ತಮಗೆ ಜನಿಸಿದ್ದಲ್ಲ ಎಂದು ದರ್ಶನ್ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರಿಂದ ಕೆರಳಿದ ವಿಜಯಲಕ್ಷ್ಮಿ, ‘ಪತಿ ಹೀಗೆ ಹೇಳುವುದಾದರೆ, ಡಿಎನ್‍ಎ ಪರೀಕ್ಷೆಗೂ ಸಿದ್ಧ’ ಎಂದು ಸವಾಲು ಹಾಕಿದ್ದಾರೆ.

‘ದರ್ಶನ್ ಯಾಕೆ ಈ ರೀತಿ ಹುಚ್ಚು ಹುಚ್ಚಾಗಿ ಹೇಳಿಕೆ ನೀಡುತ್ತಿದ್ದಾರೋ ಗೊತ್ತಿಲ್ಲ. ಅಂಥ ಅನುಮಾನ ಇದ್ದರೆ ಮಗನ ಜನನದ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಿ’ ಎಂದಿದ್ದಾರೆ.

Write A Comment