ಕರ್ನಾಟಕ

ಸ್ವಪಕ್ಷೀಯ ಶಾಸಕರಿಂದಲೇ ವಿರೋಧ: ಕೊಂಡಕ್ಕೆ ನಿಷೇಧ ಇಲ್ಲ?

Pinterest LinkedIn Tumblr

Siddaramaiah-Head-Bow-650ಬೆಂಗಳೂರು: ತಮ್ಮ ಪಕ್ಷದ ಶಾಸಕರಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊಂಡ ಹಾಯುವ ಸಂಪ್ರದಾಯಕ್ಕೆ ನಿಷೇಧ ವಿಧಿಸುವ ನಿಲುವಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಸರಿದಿದ್ದಾರೆ. ಕೊಂಡ ಹಾಯುವ ಸಂಪ್ರದಾಯ ನಿಷೇಧ ನಿರ್ಧಾರ ಪ್ರಕಟಿಸಿರುವ ಸರಕಾರದ ಧೋರಣೆಗೆ ಬುಧವಾರ ನಡೆದ ಶಾಸಕ ಪಕ್ಷದ ಸಭೆಯಲ್ಲಿ ಬಹುತೇಕ ಶಾಸಕರು ವಿರೋಧ ವ್ಯಕ್ತಪಡಿಸಿದರು. ಕೆಲವು ಶಾಸಕರು ಇಂಥ ಮೌಢ್ಯಾಚರಣೆಯನ್ನು ನಿಷೇಧಿಸುವುದೇ ಸೂಕ್ತ ಎಂದು ವಾದಿಸಿದರು. ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ, ನಿಷೇಧ ಬೇಡ. ಈ ವಿಚಾರವನ್ನು ಇಲ್ಲಿಗೆ ಬಿಡೋಣ ಎಂದು ವಿಷಯಕ್ಕೆ ತೆರೆ ಎಳೆದರು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಶಾಸಕರು, ಕೊಂಡ ಹಾಯುವುದು ಕಂದಾಚಾರ ಇರಬಹುದು. ಆದರೆ, ಅದೊಂದು ಸಂಪ್ರದಾಯವಾಗಿ ಹಳ್ಳಿಗಾಡಿನಲ್ಲಿ ಬೆಳೆದು ಬಂದಿದೆ. ಜನಮಾನಸದಲ್ಲಿ ಸ್ಥಿರವಾಗಿದೆ. ಅದನ್ನು ನಿಷೇಧಿಸುವುದಾಗಿ ಏಕಾಏಕಿ ಪ್ರಕಟಿಸುವುದರಿಂದ ಈ ಪದ್ಧತಿಗೆ ಒಗ್ಗಿಹೋಗಿರುವ ಜನಸಾಮಾನ್ಯರು ಪಕ್ಷದ ವಿರುದ್ಧ ಕೆಂಡಕಾರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.

ಇಷ್ಟಕ್ಕೂ ಇಂಥ ಘೋಷಣೆ ಮಾಡುವ ಅಗತ್ಯವಾದರೂ ಏನಿದೆ? ಎಂದು ಪ್ರಶ್ನಿಸಿದ ಶಾಸಕರು, ಅಧಿವೇಶನದಲ್ಲಿ ಆಗಾಗ ಮೌಡ್ಯ ನಿಷೇಧ ಮಸೂದೆ ವಿಚಾರ ಪ್ರಸ್ತಾವಿಸುವ ಕಾನೂನು ಸಚಿವ ಟಿ.ಬಿ. ಜಯಚಂದ್ರ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು ಎಂದು ಮೂಲಗಳು ತಿಳಿಸಿವೆ. ಇಂತಹ ನಂಬಿಕೆಗಳ ವಿಚಾರದಲ್ಲಿ ಸರಕಾರ ತಲೆ ಹಾಕುವುದು ಸರಿಯಲ್ಲ ಎಂದು ಹೇಳಿದರು ಎನ್ನಲಾಗಿದೆ.
-ಉದಯವಾಣಿ

Write A Comment