ಬೆಂಗಳೂರು: ತೀವ್ರ ಚರ್ಚೆಗೆ ಗ್ರಾಸವಾಗಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಗೊಳಿಸುವ ಸಂಬಂಧ ಮಧ್ಯೆ ಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ಬಿಜೆಪಿ ಶಾಸಕರ ನಿಯೋಗ ರಾಜ್ಯಪಾಲರಿಗೆ ಮನವಿ ಮಾಡಿದೆ.
ಶನಿವಾರ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿದ ಪಕ್ಷದ ವಿಧಾನಸಭೆ ಮತ್ತು ವಿಧಾನಸಭಾ ಸದಸ್ಯರ ನಿಯೋಗ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿತು.
ಈ ವೇಳೆ ಎಸಿಬಿ ಅಧಿಸೂಚನೆ ಕುರಿತು ಚರ್ಚೆ ನಡೆಸಿ, ಅಧಿಸೂಚನೆ ರದ್ದುಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮುಖಂಡರು ರಾಜ್ಯಪಾಲರಿಗೆ ಮನವಿ ಮಾಡಿದರು.
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪ್ರಹ್ಲಾದ್ ಜೋಶಿ, ಸರ್ಕಾರದಲ್ಲಿನ ಭ್ರಷ್ಟರನ್ನು ರಕ್ಷಿಸುವ ಸಲುವಾಗಿ ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಲಾಗಿದೆ. ಎಸಿಬಿ ರಚನೆಯನ್ನು ರದ್ದುಗೊಳಿಸುವವರೆಗೆ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ ಸಮಾಪ್ತಿಗೊಳಿಸಲು ರಾಜ್ಯ ಸರ್ಕಾರ ಎಸಿಬಿ ಸ್ಥಾಪನೆ ಮಾಡಿದೆ. ಸರ್ಕಾರದ ದುರುದ್ದೇಶದ ಬಗ್ಗೆ ರಾಜ್ಯಪಾಲರಿಗೆ ವಿವರಿಸಲಾಗಿದೆ. ಎಸಿಬಿ ರಚನೆಯನ್ನು ರದ್ದುಗೊಳಿಸುವ ಸಂಬಂಧ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಲಾಗಿದೆ. ಅಲ್ಲದೆ, ಲೋಕಾಯುಕ್ತ ಮತ್ತು ಎಸಿಬಿ ಎರಡು ಸಂಸ್ಥೆಗಳು ತನಿಖಾ ಸಂಸ್ಥೆಯಾಗಿದ್ದು, ಒಂದೇ ಕೆಲಸವನ್ನು ನಿರ್ವಹಿಸಲು ಎರಡು ಸಂಸ್ಥೆಗಳ ಅಗತ್ಯ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಲೋಕಾಯುಕ್ತ ಸಂಸ್ಥೆ ದೇಶಕ್ಕೆ ಮಾದರಿಯಾಗಿದೆ. ಆದರೆ ಈಗ ರಾಜ್ಯ ಸರ್ಕಾರದ ಕ್ರಮದಿಂದಾಗಿ ಅದರ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ. ಕಾಂಗ್ರೆಸ್ ಸಚಿವರು ಮತ್ತು ಶಾಸಕರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣಗಳು ದಾಖಲಾಗಿವೆ. ಸ್ವತಃ ಮುಖ್ಯಮಂತ್ರಿ ಸೇರಿ ಹಲವು ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ದೂರುಗಳಿವೆ. ಅದಕ್ಕಾಗಿ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಎಸಿಬಿ ರಚಿಸಲಾಗಿದೆ. ಪ್ರತಿಪಕ್ಷಗಳನ್ನು ಮಾತ್ರವಲ್ಲ, ಸ್ವಪಕ್ಷದಲ್ಲಿರುವ ರಾಜಕೀಯ ವಿರೋಧಿಗಳ ವಿರುದ್ಧವೂ ಸೇಡು ತೀರಿಸಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಅದಕ್ಕಾಗಿಯೇ ಸಿಎಂ ಎಸಿಬಿ ರಚನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಸದನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೋರಾಟ ಮಾಡಿದ್ದೇವೆ. ಬರ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಬೇಕಿದ್ದ ಕಾರಣ ಹೋರಾಟ ನಿಲ್ಲಿಸಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ಆದರೆ ಇದೀಗ ಅಧಿವೇಶನ ಮುಗಿದಿದ್ದು, ಸದನದ ಹೊರಗೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಒಂದೇ ಕೆಲಸದ ನಿರ್ವಹಣೆಗೆ ಎರಡು ಸಂಸ್ಥೆಗಳ ಅಗತ್ಯತೆ ಬಗ್ಗೆ ರಾಜ್ಯಪಾಲರು ಸಹ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಎಸಿಬಿಯ ಅನಾಹುತಗಳು ಹಾಗೂ ಅದರಿಂದ ಲೋಕಾಯುಕ್ತ ಹೇಗೆ ದುರ್ಬಲವಾಗುತ್ತದೆ ಎಂಬುದರ ಸಂಪೂರ್ಣ ವಿವರವನ್ನು ರಾಜ್ಯಪಾಲರಿಗೆ ನೀಡಲಾಗಿದೆ. ಸರ್ಕಾರದಿಂದ ಮಾಹಿತಿ ಕೇಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ.
-ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ
-ಉದಯವಾಣಿ