ದೊಡ್ಡಬಳ್ಳಾಪುರ: ನಗರದ ದರ್ಗಾಪುರದಲ್ಲಿ ಒಳಚರಂಡಿ ಸ್ವಚ್ಛಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ಹಾಗೂ ಅವರನ್ನು ರಕ್ಷಿಸಲು ಹೋದ ಇಬ್ಬರು ದಾರಿಹೋಕರು ಮ್ಯಾನ್‌ಹೋಲ್‌ನಲ್ಲಿ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ನಡೆದಿದೆ.
ಮೃತಪಟ್ಟ ಕಾರ್ಮಿಕರನ್ನು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಶ್ರವಣೂರು ಗ್ರಾಮದ ಮುನಿಸ್ವಾಮಿ(45) ಹಾಗೂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಪಲಮನೇರು ತಾಲ್ಲೂಕಿನ ಮೂಲತಿಮ್ಮನಹಳ್ಳಿ ಗ್ರಾಮದ ಜಗನ್ನಾಥ್(24) ಎಂದು ಗುರುತಿಸಲಾಗಿದೆ. ಕಾರ್ಮಿಕರನ್ನು ರಕ್ಷಿಸಲು ಹೋದ ದೊಡ್ಡಬಳ್ಳಾಪುರ ನಗರದ ವನ್ನಿಗರಪೇಟೆ ನಿವಾಸಿ ಮಧು(21) ಮತ್ತು ಹಮಾಮ್ ಗ್ರಾಮದ ಮುನಿರಾಜು (22) ಸಹ ಮೃತಪಟ್ಟಿದ್ದಾರೆ.
ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಘಟನೆ ವಿವರ: ದರ್ಗಾಪುರದಲ್ಲಿ ಒಳಚರಂಡಿ ಸ್ವಚ್ಛಗೊಳಿಸಿ ನೀರು ಹರಿಯುವಂತೆ ಮಾಡಲು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾರ್ಮಿಕ ಮುನಿಸ್ವಾಮಿ ಮ್ಯಾನ್‌ಹೋಲ್ ಒಳಗೆ ಇಳಿದಿದ್ದಾನೆ. ಸುಮಾರು 14 ಅಡಿಗಳಷ್ಟು ಆಳವಾಗಿದ್ದ ಮ್ಯಾನ್‌ಹೋಲ್ ಒಳಗೆ ಮಿಥೇನ್ ಗ್ಯಾಸ್ ತುಂಬಿಕೊಂಡಿತ್ತು ಎನ್ನಲಾಗಿದೆ. ಒಳಗೆ ಇಳಿದಿದ್ದ ಕಾರ್ಮಿಕ ಉಸಿರಾಟಕ್ಕೆ ತೊಂದರೆಯಾಗಿದ್ದರಿಂದ ಮೇಲೆತ್ತುವಂತೆ ಕೂಗಿಕೊಳ್ಳಲು ಪ್ರಾರಂಭಿಸಿದ್ದಾರೆ. ಮೇಲಿದ್ದ ಮತ್ತೊಬ್ಬ ಕಾರ್ಮಿಕ ಜಗನ್ನಾಥ್ ಸಹ ಒಳಗೆ ಇಳಿದಿದ್ದಾರೆ.
ಇಬ್ಬರು ಕಾರ್ಮಿಕರು ಮ್ಯಾನ್‌ಹೋಲ್ ಒಳಗೆ ಸಿಕ್ಕಿಹಾಕಿಕೊಂಡು ಕೂಗಿಕೊಳ್ಳುತ್ತಿದ್ದನ್ನು ಬೈಕ್‌ನಲ್ಲಿ ಹೋಗುತ್ತಿದ್ದ ಮಧು ಕೇಳಿಸಿಕೊಂಡು ಮೇಲೆತ್ತಲು ಸಹಾಯ ಮಾಡಲು ಒಳಗಿದ್ದ ಕಾರ್ಮಿಕರಿಗೆ ಕೈಗಳನ್ನು ನೀಡಿದ್ದಾರೆ. ಮ್ಯಾನ್‌ಹೋಲ್ ಒಳಗಿದ್ದ ಕಾರ್ಮಿಕರು ಮಧುವನ್ನು ಒಳಗೆ ಎಳೆದುಕೊಂಡಿದ್ದಾರೆ. ಇದನ್ನು ನೋಡಿದ ಮುನಿರಾಜು ಮಧುವನ್ನು ರಕ್ಷಿಸಲು ಮುಂದಾಗಿದ್ದಾರೆ. ಈತ ಸಹ ತಲೆ ಒಳಗೆ ಕಾಲು ಮೇಲಾಗಿ ಮ್ಯಾನ್‌ಹೋಲ್ ಒಳಗೆ ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ರಾವುಸ್ ಕಂಪೆನಿ: 2009ರಲ್ಲಿ ₹ 29 ಕೋಟಿ ವೆಚ್ಚದಲ್ಲಿ ಪ್ರಾರಂಭವಾದ ಒಳಚರಂಡಿ ಕಾಮಗಾರಿ ಗುತ್ತಿಗೆಯನ್ನು ಹೈದರಾಬಾದ್ ಮೂಲದ ರಾವುಸ್ ಕಂಪೆನಿ ಗುತ್ತಿಗೆ ಪಡೆದಿದೆ. ಪ್ರತಿಭಟನೆ: ಗುತ್ತಿಗೆದಾರರನ್ನು ಬಂಧಿಸುಐವಂತೆ ಒತ್ತಾಯಿಸಿ ಕನ್ನಡಪರ ಹಾಗೂ ಕಮ್ಯುನಿಸ್ಟ್ ಪಕ್ಷದ ಮುಖಂಡರು ಶವಾಗಾರದ ಸಮೀಪದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.