ಬೆಂಗಳೂರು,ಏ.೫-ದ್ವಿತಿಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧ ಬಂಧಿಸಲಾಗಿರುವ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ ಅವರ ಅಪ್ತಸಹಾಯಕ ಓಬಳರಾಜು ಸೇರಿ ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ತೆಗೆದುಕೊಂಡಿರುವ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ಗೊಳಪಡಿಸಿದ್ದಾರೆ.
ಆರೋಪಿಗಳಾದ ಶ್ರೀರಾಂಪುರದ ಓಬಳರಾಜು(೫೧) ಆದರ್ಶನಗರದ ಮಂಜುನಾಥ್(೪೭)ಹಾಗೂ ಮಲ್ಲೇಶ್ವರಂನ ರುದ್ರಪ್ಪ(೫೦)ಅವರನ್ನು ೭ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಐಡಿ ಅಧಿಕಾರಿಗಳು ಏಪ್ರಿಲ್ ೧೩ ರವರಗೆ ವಶಕ್ಕೆ ಪಡೆದು ರಹಸ್ಯ ಸ್ಥಳಕ್ಕೆ ಕರೆದೊಯ್ದು ನಡೆಸಿ ವಿಚಾರಣೆಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿರುವ ಹಲವರ ಮಾಹಿತಿ ನೀಡಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯ ದಂಧೆಯು ಹಲವು ವರ್ಷಗಳಿಂದ ನಡೆಯುತ್ತಿದ್ದು ಅದರಲ್ಲಿ ಹಲವು ಟ್ಯೂಟೋರಿಯಲ್‌ಗಳು ಉಪನ್ಯಾಸಕರು ಭಾಗಿಯಾಗಿರುವ ಮಾಹಿತಿ ನೀಡಿದ್ದಾರೆ,ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿರುವ ಸಿಐಡಿ ಅಧಿಕಾರಿಗಳು ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಗುಬ್ಬಿ ತಾಲ್ಲೂಕಿನ ಕಾಗೇರಿಯ ಶಿವಕುಮಾರ್ ಅಲಿಯಾಸ್ ಶಿವಕುಮಾರ್ ಗೂರೂಜಿಯು ಪ್ರಮುಖ ಪಾತ್ರವಹಿಸಿರುವುದು ಪತ್ತೆಯಾಗಿದೆ ಹಲವು ವರ್ಷಗಳಿಂದ ದಂಧೆ ನಡೆಸುತ್ತಿರುವ ಈತ ಮೊದಲು ಉಪನ್ಯಾಸಕನಾಗಿರುವುದು ಗೊತ್ತಾಗಿದ್ದು ತಲೆ ಮರೆಸಿಕೊಂಡಿರುವ ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ.
ಕಳೆದ ೨೦೧೩ರಲ್ಲಿ ಶಿವಕುಮಾರ್ ವಿರುದ್ಧ ಪ್ರಶ್ನೆ ಪತ್ರಕೆ ಸೋರಿಕೆ ಸಂಬಂಧ ಪ್ರಕರಣ ದಾಖಲಾಗಿದೆ ಶಿವಕುಮಾರ್‌ನ ಇಬ್ಬರು ಪುತ್ರರು ಇದೇ ದಂಧೆಯಲ್ಲಿ ಭಾಗಿಯಾಗಿದ್ದಾರೆ ಅವರಿಗಾಗಿ ಸಿಐಡಿ ತನಿಖಾಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಶಿವಕುಮಾರ್ ಪುತ್ರ ದಿನೇಶ್ ಎಂಬಾತ ವೈದ್ಯಕೀಯ ಪದವಿಯನ್ನು ಅರ್ಧಕ್ಕೆ ಬಿಟ್ಟು ಪ್ರಶ್ನೆಪತ್ರಿಕೆ ಸೋರಿಕೆ ದಂಧೆಯಲ್ಲಿ ಭಾಗಿಯಾಗಿದ್ದಾನೆ.
ಪಿತೂರಿ ಕೇಂದ್ರ
ವಿಧಾನಸೌಧದ ಕಚೇರಿಯಿಂದಲೇ ಓಬಳರಾಜು ಅವರು ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ರವಾನಿಸಿರುವುದರಿಂದ ಸಿಐಡಿ ಅಧಿಕಾರಿಗಳು ವಿಧಾನಸೌಧದ ಕಚೇರಿ ಇನ್ನಿತರ ಕಡೆಗಳಲ್ಲಿ ದಾಳಿ ನಡೆಸಿ ಮಾಹಿತಿ ನಡೆಸಿದ್ದಾರೆ ಆರೋಪಿಗಳ ಮಾಹಿತಿ ಮೇರೆಗೆ ೨೦ಕ್ಕೂ ಹೆಚ್ಚು ಉಪನ್ಯಾಸಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ತಮ್ಮ ಪಾತ್ರವಿರುವುದನ್ನು ಒಪ್ಪಿಕೊಂಡಿರುವ ಮೂವರು ಆರೋಪಿಗಳು ಸೋರಿಕೆಯ ಜಾಲದಲ್ಲಿ ಭಾಗಿಯಾಗಿರುವವರ ವಿವರವನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದು ಅದ್ನ್ನು ಆಧರಿಸಿ ಕಾರ್ಯಾಚರಣೆ ನಡೆಸಿರುವುದಾಗಿ ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿಸಿರುವ ಮೂವರು ಆರೋಪಿಗಳಲ್ಲಿ ಮಂಜುನಾಥ್ ಕೈವಾಡವಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ ಕಳೆದ ಮಾರ್ಚ್ ೨೦ ರಂದು ಆರೋಪಿ ಓಬಳರಾಜು ಅವರ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಪುತ್ರನಿಗೆ ಆರೋಪಿ ಮಂಜುನಾಥ್ ವ್ಯಾಟ್ಸಪ್ ಮಾಡ್ತಾನೆ. ಬಳಿಕ ಓಬಳರಾಜು ಬಳಿ ಬೇಸಿಕ್ ಮೊಬೈಲ್ ಇರುವ ಕಾರಣ ಓಬಳರಾಜು ಪುತ್ರ ರುದ್ರಪ್ಪನ ಮಗಳಿಗೆ ವ್ಯಾಟ್ಸಪ್ ಮಾಡಿದ್ದಾನೆ ಎಂದು ಮಂಜುನಾಥ್ ವಿಚಾರಣೆ ವೇಳೆ ತಿಳಿಸಿದ್ದಾನೆ.
ಇನ್ನು ನನ್ನ ಬಳಿ ಬೇಸಿಕ್ ಮೊಬೈಲ್ ಇರುವುದರಿಂದ ವ್ಯಾಟ್ಸಪ್ ಮೆಸ್ಸೇಜ್ ಬಂದಿರಲಿಲ್ಲ. ಆದರೆ ಮಂಜುನಾಥ್ ಜೊತೆ ಮಾತಾಡೋಕೆ ಸಚಿವರ ಕಚೇರಿ ಫೋನ್ ಬಳಸುತ್ತಿದ್ದ ಎಂದು ಓಬಳರಾಜು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಗಿ ಸಿಐಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನು ಎರಡನೇ ಬಾರಿಯ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲೂ ಆರೋಪಿ ಮಂಜುನಾಥ್ ಕೈವಾಡವಿರುವ ಶಂಕೆಯನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಪ್ರಕರಣದ ಕುರಿತು ಒಟ್ಟು ೩೦ ಹೆಚ್ಚು ಮಂದಿಯನ್ನು ಸಿಐಡಿ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.