ಬೆಂಗಳೂರು, ಏ. ೫- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಸಮಾರಂಭದಲ್ಲಿ ನಾಡಿನ ಮೂವರು ಖ್ಯಾತ ವೈದ್ಯರಿಗೆ ಗೌರವ ಡಾಕ್ಟರೇಟ್ ಪದವಿ ಹಾಗೂ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳಿಗೆ ರಾಜ್ಯಪಾಲರಾದ ವಜುಭಾಯಿ ವಾಲಾ ಪದವಿ ಪ್ರದಾನ ಮಾಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಭಾರತೀಯ ವೈದ್ಯಕೀಯ ಮಂಡಳಿಯ ಅಧ್ಯಕ್ಷೆ ಡಾ. ಜಯಶ್ರೀ ಪಿ. ಮೆಹ್ತಾ, ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್. ರವೀಂದ್ರನಾಥ್ ಸೇರಿದಂತೆ ಇತರರ ಸಮ್ಮುಖದಲ್ಲಿ ಇಎನ್ ಟಿ ತಜ್ಞ ಡಾ. ಸಿ. ಎಂ. ಗುರುಮೂರ್ತಿ, ಹೃದಯ ತಜ್ಞ ಡಾ. ವಿವೇಕ್ ಜವಳಿ ಹಾಗೂ ಆಯುರ್ವೇದ ವೈದ್ಯ ಡಾ. ಟಿ. ಎಲ್. ದೇವರಾಜು ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಇದೇ ವೇಳೆ 10 ಚಿನ್ನದ ಪದಕ ಪಡೆದ ಕೆಂಪೇಗೌಡ ವೈದ್ಯಕೀಯ ವಿದ್ಯಾಲಯದ ಎಂಬಿಬಿಎಸ್ ವಿದ್ಯಾರ್ಥಿನಿ ಡಾ. ನಿಶಾ ಬಿ. ಜೈನ್, ಮೂರು ಚಿನ್ನದ ಪದಕ ಹಾಗೂ 2 ನಗದು ಪ್ರಶಸ್ತಿ ಪಡೆದ ಬೆಂಗಳೂರಿನ ಕಾಲಬೈರವೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ. ಸಮತಾ ಹೊನ್ನಾವರ್, ತಲಾ ನಾಲ್ಕು ಚಿನ್ನದ ಪದಕ ಪಡೆದ ಗುಲ್ಬರ್ಗಾ ಎಂ.ಆರ್. ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಡಾ. ಐಶ್ವರ್ಯಾ ಉಮೇಶ್‌ಚಂದ್ರ ಹಾಗೂ ಬೆಂಗಳೂರಿನ ಕಾಲಭೈರವೇಶ್ವರ ವೈದ್ಯಕೀಯ ಕಾಲೇಜಿನ ಡಾ ವಿದ್ಯಾಶ್ರೀ ಎಂ. ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ತಲಾ ಮೂರು ಚಿನ್ನದ ಪದಕ ಪಡೆದ ದಾವಣಗೆರೆಯ ಜೆಎಂಎಂ ಮೆಡಿಕಲ್ ಕಾಲೇಜಿನ ಡಾ. ಫರ್ಹತ್ ಫಾತೀಮಾ, ಧಾರವಾಡದ ಎಸ್‌ಬಿಎಂ ಕಾಲೇಜಿನ ಡಾ ಪ್ರಿಯಂ ಗುಪ್ತ, ಉಡುಪಿಯ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಡಾ. ನಂದೀಶ್ ಜೆ., ಹಾಗೂ ತಲಾ ಎರಡು ಚಿನ್ನದ ಪದಕ ಪಡೆದ ಬಳ್ಳಾರಿಯ ವಿಜಯನಗರ ವೈದ್ಯಕೀಯ ಕಾಲೇಜಿನ ಡಾ ವತ್ಸಲಾ ಎಸ್., ದಾವಣಗೆರೆಯ ಜೆಎಂಎಂ ಮೆಡಿಕಲ್ ಕಾಲೇಜಿನ ಡಾ. ಅನುರಂಜಿತ ಪಲ್ಲವಿ, ಅದೇ ಕಾಲೇಜಿನ ಡಾ. ಸ್ನೇಹರಾಜ್, ವಿಜಯಪುರದ ಆಲ್ ಆಮೀನ್ ವೈದ್ಯಕೀಯ ಕಾಲೇಜಿನ ಡಾ. ಸ್ಮಿತಾ ಎಸ್, ಮಂಡ್ಯ ವೈದ್ಯಕೀಯ ಕಾಲೇಜಿನ ಡಾ. ಅರುಣ್ ಎಸ್, ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿನ ಡಾ ರಕ್ಷಾ ಆನಂದ್, ಬೆಂಗಳೂರಿನ ವೈದೇಹಿ ವೈದ್ಯಕೀಯ ಕಾಲೇಜಿನ ಡಾ. ವಿಶಾಖ್ ಸಿ.ಕೆರಿ, ಬೆಂಗಳೂರಿನ ದಂತ ವೈದ್ಯಕೀಯ ಕಾಲೇಜಿನ ಸಮೀಕ್ಷಾ ಮಿಶ್ರಾ, ಅದೇ ಕಾಲೇಜಿನ ಡಾ. ಸುಬ್ರಹ್ಮಣ್ಯ ಬಿ. ಹಾಗೂ ಕೊಪ್ಪದ ಎಎಲ್‌ಎನ್ ರಾವ್ ಆಯುರ್ವೇದ ಕಾಲೇಜಿನ ಡಾ ಶ್ರೀಲಕ್ಷ್ಮಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
18ನೇ ಘಟಿಕೋತ್ಸವದಲ್ಲಿ 59 ಮಂದಿಗೆ ಪಿಎಚ್.ಡಿ ಪದವಿ, 109 ಮಂದಿಗೆ ಸೂಪರ್ ಸ್ಪೆಷಾಲಿಟಿ ಪದವಿ, 5338 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, 171 ವಿದ್ಯಾರ್ಥಿಗಳಿಗೆ ಫೆಲೋಶಿಪ್ ಪದವಿ, 17 ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಕೋರ್ಸ್, ಹಾಗೂ ಎಂಬಿಬಿಎಸ್‌ನಲ್ಲಿ ಪದವಿ ಪಡೆದ 23,316 ವಿದ್ಯಾರ್ಥಿಗಳು ಸೇರಿದಂತೆ 29010 ಮಂದಿ ಪದವಿಗೆ ಅರ್ಹರಾಗಿದ್ದಾರೆ.
102 ಚಿನ್ನದ ಪದಕಗಳ ಪೈಕಿ 90 ಚಿನ್ನದ ಪದಕಗಳನ್ನು ವಿದ್ಯಾರ್ಥಿನಿಯರು ಪಡೆದಿದ್ದು, ಉಳಿದ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿಗಳು ಪಡೆದಿದ್ದಾರೆ.