ಬೆಂಗಳೂರು: ಪಿಯು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಪರೀಕ್ಷಾ ಅಕ್ರಮಗಳನ್ನು ತಡೆಯಲು ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ಧರಿಸಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು, ಪ್ರಶ್ನೆ ಪತ್ರಿಕೆ ಸೋರಿಯಲ್ಲಿ ಭಾಗಿಯಾಗುವ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ವಿರುದ್ಧ ಜಾಮೀನು ರಹಿತ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಕಾನೂನು ಇಲಾಖೆ ಜೊತೆ ಸಮಗ್ರ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಪರೀಕ್ಷಾ ಅಕ್ರಮದಲ್ಲಿ ತೊಡಗುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ತೀರ್ಮಾನಿಸಲಾಗಿದೆ ಎಂದಿರುವ ಸಚಿವರು, ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಸಲುವಾಗಿ ಶಿಕ್ಷಣ ಇಲಾಖೆಯ ಕಾನೂನಿಗೆ ತಿದ್ದುಪಡಿ ತರಬೇಕಾಗಿರುವುದು ಅಗತ್ಯವಾಗಿದೆ. ಅಕ್ರಮ ನಡೆಸುವ ಸಿಬಂದಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರ ವಿರುದ್ದ ಜಾಮೀನು ರಹಿತ ಕ್ರಿಮಿನಲ್ ಕೇಸ್ ದಾಖಲಿಸಲು ಚಿಂತನೆ ನಡೆಸಲಾಗಿದೆ ಎಂದರು.
ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಶಿಕ್ಷಣ ಇಲಾಖೆಯಿಂದ ಪಿಯು ಮಂಡಳಿಯನ್ನು ಪ್ರತ್ಯೇಕಿಸಲು ಯೋಚಿಸಲಾಗಿದ್ದು, ಆಡಳಿತ ಮಂಡಳಿ ಮತ್ತು ಪರೀಕ್ಷಾ ಮಂಡಳಿ ಇಬ್ಟಾಗ ಮಾಡಲು ಚಿಂತಿಸಲಾಗಿದೆ ಎಂದು ಸಹ ಕಿಮ್ಮನೆ ರತ್ನಾಕರ ಅವರು ತಿಳಿಸಿದರು.
ಇದೇ ವೇಳೆ, ಪಿಯು ಮೌಲ್ಯಮಾಪನ ಬಹಿಷ್ಕರಿಸಿರುವ ಉಪನ್ಯಾಸಕರ ಬಗ್ಗೆ ಪ್ರತಿಕ್ರಿಯಿಸಿದ ಕಿಮ್ಮನೆ ರತ್ನಕಾರ, ಮೌಲ್ಯ ಮಾಪನ ಕುರಿತು ಯಾರಿಗೂ ಆತಂಕ ಬೇಡ. ಉಪನ್ಯಾಸಕರು ಮುಷ್ಕರ ಹಿಂಪಡೆದು, ಮೌಲ್ಯಮಾಪನದಲ್ಲಿ ಭಾಗಿಯಾಗುತ್ತಾರೆ ಎಂಬ ವಿಶ್ವಾಸವಿದೆ. ಒಂದು ವೇಳೆ ಮೌಲ್ಯಮಾಪನಕ್ಕೆ ನಿರಾಕರಿಸಿದೆ ಸರ್ಕಾರ ಅದಕ್ಕೆ ಬೇರೆ ವ್ಯವಸ್ಥೆ ಮಾಡುತ್ತದೆ ಮತ್ತು ನಿಗದಿತ ಸಮಯದಲ್ಲೇ ಪಿಯು ಫಲಿತಾಂಶ ಪ್ರಕಟವಾಗಲಿದೆ ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ.