ಬೆಂಗಳೂರು, ಏ.7- ರಾಜಕೀಯ ಒತ್ತಡಕ್ಕೆ ಮಣಿದು ಜಿಲ್ಲಾ ಪಂಚಾಯ್ತಿ ಮೀಸಲಾತಿ ನಿಗದಿ ಮಾಡಿರುವ ನೈತಿಕ ಹೊಣೆ ಹೊತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಬಹಿರಂಗ ಕ್ಷಮೆ ಯಾಚಿಸಬೇಕು ಹಾಗೂ ದಾಖಲೆ ಸಮೇತ ಬಹಿರಂಗ ಚರ್ಚೆಗೆ ಆಗಮಿಸುವಂತೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಇಂದಿಲ್ಲಿ ಆಹ್ವಾನ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಆಧಾರದ ಮೇಲೆ ನಿಗದಿಯಾಗಬೇಕಿದ್ದ ಮೀಸಲಾತಿ ರಾಜಕೀಯ ಒತ್ತಡಕ್ಕೆ ಮಣಿದು ಮಾಡಲಾಗಿದೆ. ಇದಕ್ಕೆ ನಾವು ದಾಖಲೆ ಒದಗಿಸುತ್ತೇವೆ. ಇದನ್ನು ಸಾಬೀತುಪಡಿಸಲು ನಾನು ವಿಫಲವಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ರೇವಣ್ಣ ಘೋಷಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ಮೀಸಲಾತಿ ಕುರಿತಂತೆ ಬಹಿರಂಗ ಚರ್ಚೆ ನಡೆಸಲು ಪಂಥಾಹ್ವಾನ ನೀಡಿರುವ ಅವರು, ರಾಜಕೀಯ ಒತ್ತಡಕ್ಕೆ ಮಣಿದು ಮೀಸಲಾತಿ ನೀಡಲಾಗಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರಕ್ಕೆ ನೈತಿಕ ಹೊಣೆ ಇದ್ದರೆ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಮೀಸಲಾತಿ ನಿಗದಿಪಡಿಸಿರುವುದನ್ನು ಸಾಬೀತುಪಡಿಸಲಿ ಎಂದ ಅವರು, 1990ರಿಂದ 2015ರ ವರೆಗೆ ಮೀಸಲಾತಿ ಕುರಿತ ದಾಖಲೆ ಒದಗಿಸಿದ ಅವರು, ಜಿಲ್ಲಾವಾರು ಜನಸಂಖ್ಯೆಯ ವಿವರ ನೀಡಿದರು.
ಸಾಮಾಜಿಕ ನ್ಯಾಯ ಮೈಸೂರಿನಲ್ಲೇ ಇಲ್ಲ. ಶೇ.0.75ರಷ್ಟು ಪರಿಶಿಷ್ಟ ಪಂಗಡದವರಿದ್ದಾರೆ. ಅಲ್ಲಿ ಏಕೆ ಮೀಸಲಾತಿ ಗಣನೆಗೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಎಸ್‌ಟಿಗೆ ಅವಕಾಶ ನೀಡಲಾಗಿತ್ತು ಎಂದರು. ಅಧಿಕಾರಕ್ಕಾಗಿ ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಕಾಂಗ್ರೆಸ್ ಮೀಸಲು ನಿಗದಿಯಲ್ಲಿ ಅನುಸರಿಸಿರುವ ಮಾನದಂಡವೇನು ಎಂದು ಪ್ರಶ್ನಿಸಿದ ಅವರು, ಎರಡು-ಮೂರು ವರ್ಗಗಳನ್ನು ಅಧಿಕಾರದಿಂದ ದೂರವಿಡಲು ಹುನ್ನಾರ ನಡೆಸಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮರ್ಯಾದೆ ಇದೆಯೇ ಎಂದ ಅವರು, ಸಚಿವರು ತಮ್ಮ ಪುತ್ರನಿಗಾಗಿ ಕುದುರೆ ವ್ಯಾಪಾರ ಮಾಡಲು ಯತ್ನಿಸಿದ್ದರು. ವ್ಯಾಪಾರ ನಡೆಯಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್‌ಗೆ ಅಂತ್ಯಕಾಲ ಸಮೀಪಿಸಿದೆ. ಜೆಡಿಎಸ್ ಮುಗಿಸುವ ಕನಸು ನನಸಾಗಲ್ಲ. 45 ದಿನ ಮೀಸಲಾತಿ ನಿಗದಿಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು ಎಂದ ಅವರು, ಅಧಿಕಾರಕ್ಕಾಗಿ ಯಾರ ಬಳಿಯೂ ಬಳಿ ಹೋಗಿಲ್ಲ. ಸಾರ್ವಜನಿಕ ಕೆಲಸಕ್ಕಾಗಿ ಸಿಎಂ ಬಳಿ ಹೋಗಿದ್ದೇನೆ ಎಂದರು.