ಬೆಂಗಳೂರು: ಕಾಡುಗೋಡಿಯ ಸಾಯಿ ಕಾಲೋನಿಯಲ್ಲಿ ನಡೆದಿದ್ದ ಜೆಸಿಬಿ ಆಪರೇಟರ್ ಕೃಷ್ಣಮೂರ್ತಿ ಕೊಲೆ ಪ್ರಕರಣ ಸಂಬಂಧ ಕಾಡುಗೋಡಿ ಪೊಲೀಸರು, ಹತ್ಯೆಗೆ ಸುಪಾರಿ ಕೊಟ್ಟಿದ್ದ ಮಹಿಳೆ ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ.
ಕೆ. ದೊಮ್ಮಸಂದ್ರದ ಶೋಭಾ (38), ಪ್ಯಾಲೆಸ್ ಗುಟ್ಟಹಳ್ಳಿಯ ರಾಜೇಶ್ (23), ಎಚ್‌ಎಎಲ್‌ನ ಹರೀಶ್ (26), ಕೋಲಾರದ ಹನುಮಂತ (25), ಪವನ್ (25), ರಾಜೇಶ್ (23), ಸಂತೋಷ್ ಕುಮಾರ್ (26), ನಿಖಿಲ್ (23) ಹಾಗೂ ಆಂಧ್ರಪ್ರದೇಶದ ಸುರೇಶ್‌ನನ್ನು (22) ಬಂಧಿಸಲಾಗಿದೆ. ಮತ್ತೊಬ್ಬ ಪ್ರಮುಖ ಆರೋಪಿ ಸುಬ್ರಮಣಿ ಸೇರಿ ಮೂವರು ತಲೆಮರೆಸಿಕೊಂಡಿದ್ದಾರೆ.
ಆರೋಪಿಗಳು ಏಪ್ರಿಲ್ 1ರಂದು ರಾತ್ರಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ಕೃಷ್ಣಮೂರ್ತಿ ಅವರಿಗೆ ಕಾರಿನಿಂದ ಗುದ್ದಿಸಿ, ನಂತರ ಕೆಳಕ್ಕೆ ಬಿದ್ದ ಅವರ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು.
ಕೋಲಾರದವರಾದ ಕೃಷ್ಣಮೂರ್ತಿ, ಕೆಲ ವರ್ಷಗಳ ಹಿಂದೆ ಕಾಡುಗೋಡಿಯ ಮೋಹನ್ ಬಾಬು ಎಂಬುವವರಿಗೆ ಸೇರಿದ ಜೆಸಿಬಿ ವಾಹನದ ಆಪರೇಟರ್ ಆಗಿ ಕೆಲಸಕ್ಕೆ ಸೇರಿದ್ದರು.
ಮೋಹನ್ ಅವರ ವ್ಯವಹಾರಗಳ ಮೇಲ್ವಿಚಾರಣೆ ನೋಡಿಕೊಳ್ಳುವ ಮೂಲಕ ಅವರ ಕುಟುಂಬಕ್ಕೆ ಹತ್ತಿರವಾಗಿದ್ದ ಅವರು, ಮಾಲೀಕರ ಪುತ್ರಿಯನ್ನು ಮದುವೆಯಾಗುವುದಾಗಿ ಎಂದು ಹೇಳಿಕೊಂಡು ಓಡಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ಇತ್ತೀಚೆಗೆ ಅನಾರೋಗ್ಯದಿಂದಾಗಿ ಮೋಹನ್ ತೀರಿಕೊಂಡಿದ್ದರು. ಆಗ ಅವರ ಎಲ್ಲ ವ್ಯವಹಾರ ನೋಡಿಕೊಳ್ಳತೊಡಗಿದ ಕೃಷ್ಣಮೂರ್ತಿ, ಹಣಕಾಸಿಗೆ ಸಂಬಂಧಿಸಿದ ಲೆಕ್ಕವನ್ನು ಮೋಹನ್ ಪತ್ನಿ ಶೋಭಾ ಅವರಿಗೆ ಸರಿಯಾಗಿ ನೀಡುತ್ತಿರಲಿಲ್ಲ. ಅಲ್ಲದೆ, ಪುತ್ರಿಯನ್ನು ಮದುವೆ ಮಾಡಿಕೊಡುವಂತೆ ಒತ್ತಡ ಹಾಕುತ್ತಿದ್ದರು.
ಆದರೆ, ಪುತ್ರಿಯನ್ನು ಮದುವೆ ಮಾಡಿಕೊಡಲು ಶೋಭಾ ನಿರಾಕರಿಸಿದ್ದರು. ಈ ಮಧ್ಯೆ ಶೋಭಾ ಅವರಿಗೆ ಸೇರಿದ ಕಟ್ಟಡದಲ್ಲಿ ಬೇಕರಿ ಇಟ್ಟುಕೊಂಡಿದ್ದ ಸುಬ್ರಮಣಿ ಮತ್ತು ಸುರೇಶ್ ಜತೆ ಜಗಳ ತೆಗೆದಿದ್ದ ಕೃಷ್ಣಮೂರ್ತಿ, ಇಬ್ಬರನ್ನೂ ಖಾಲಿ ಮಾಡಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಹೀಗೆ ಕುಟುಂಬದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸುತ್ತಿದ್ದನ್ನು ಸಹಿಸದ ಶೋಭಾ, ಕೃಷ್ಣಮೂರ್ತಿ ಹತ್ಯೆಗಾಗಿ ಸುಬ್ರಮಣಿ ಮತ್ತು ಸುರೇಶ್‌ಗೆ ₹ 10 ಲಕ್ಷ ಸುಪಾರಿ ಕೊಟ್ಟಿದ್ದರು. ಅಂತೆಯೇ ಅವರಿಬ್ಬರೂ ತಮ್ಮ ಸಹಚರರ ಜತೆ ಸೇರಿ ಕೃತ್ಯ ಎಸಗಿದ್ದರು. ಘಟನೆ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮೊಬೈಲ್ ಕರೆಗಳ ವಿವರ ಆಧರಿಸಿ ಬಂಧಿಸಲಾಯಿತು ಎಂದು ಪೊಲೀಸರು ವಿವರಿಸಿದರು.