ಚೆನ್ನೈ: ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಈಗ ನೀರಿನ ಮಟ್ಟ ಕುಸಿಯುತ್ತಿರುವುದರಿಂದ ತಮಿಳುನಾಡಿಗೆ ಸೇರಿದ ಕಾವೇರಿ ನದಿಗೆ ಬಿಡುವ ನೀರಿನ ಪ್ರಮಾಣವನ್ನು ಕರ್ನಾಟಕ ಕಡಿಮೆ ಮಾಡಿದೆ. ಹೀಗಾಗಿ ಕಾವೇರಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ರೈತರಿಗೆ ಬಿಸಿಲಿನ ತಾಪ ತಟ್ಟಿದೆ. ವ್ಯವಸಾಯಕ್ಕೆ ಬೇಕಾದ ನೀರಿಗೆ ಮಾತ್ರವಲ್ಲದೆ ಕುಡಿಯುವ ನೀರಿಗೂ ಬರಗಾಲ ಆರಂಭವಾಗಿದೆ.
ಮೊನ್ನೆ ಶನಿವಾರ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 81.17 ಅಡಿ ಇದೆ. ಈ ತಿಂಗಳಾಂತ್ಯಕ್ಕೆ ಮಳೆ ಬರುವ ನಿರೀಕ್ಷೆಯಿದೆ. ಮಳೆ ಬರದೇ ಇದ್ದರೆ ಕಾವೇರಿ ನದಿ ಪಾತ್ರದ ಜನರ ಜೀವನ ಮಟ್ಟ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ಕರ್ನಾಟಕ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರಸ್ತುತ ಕೆಆರ್ ಎಸ್ ಜಲಾಶಯದಲ್ಲಿ 11 ಟಿಎಂಸಿ ನೀರು ಇದೆ. ಅದರಲ್ಲಿ 4.5 ಟಿಎಂಸಿ ನೀರು ವೃಥಾ ಸಂಗ್ರಹವಾಗಿದೆ ಮತ್ತೆ 4.5 ಟಿಎಂಸಿ ನೀರನ್ನು ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಜನತೆಗೆ ಕುಡಿಯಲು ಪೂರೈಸಲಾಗುತ್ತದೆ. ಕಾಲುವೆಗಳಿಗೆ ಹರಿಸುವ ನೀರನ್ನು ಹದಿನೈದು ದಿನಗಳ ಹಿಂದೆಯೇ ನಿಲ್ಲಿಸಲಾಗಿದೆ.ಇನ್ನು 3 ಟಿಎಂಸಿ ನೀರು ಬಾಕಿ ಉಳಿದಿದೆ. ಜಲಾಶಯದಿಂದ ಸರಾಸರಿ ಸಾವಿರದ 203 ಟಿಎಂಸಿ ನೀರು ಹೊರಹೋಗುವಂತೆ ನಾವು ನೋಡಿಕೊಳ್ಳುತ್ತೇವೆ. ಅದರಲ್ಲಿ ಸಾವಿರದ 103 ಕ್ಯೂಸೆಕ್ ನೀರು ಕಾವೇರಿ ನದಿಗೆ ಹೋಗುತ್ತದೆ. ಅದು ಇನ್ನೊಂದು ತಿಂಗಳಲ್ಲಿ ಮಳೆ ಬಾರದಿದ್ದರೆ ಆ ನೀರು ಬತ್ತಿ ಹೋಗುತ್ತದೆ ಎನ್ನುತ್ತಾರೆ ಕೆಆರ್ ಎಸ್ ಅಧಿಕಾರಿಗಳು.
ಸಾಮಾನ್ಯ ವರ್ಷಗಳಲ್ಲಿ ಕರ್ನಾಟಕ ತಮಿಳುನಾಡಿಗೆ ತಿಂಗಳಿಗೆ 192 ಟಿಎಂಸಿ ನೀರನ್ನು ಬಿಡುಗಡೆ ಮಾಡುತ್ತದೆ. ಈ ವರ್ಷ ಕರ್ನಾಟಕ ಇದುವರೆಗೆ 120 ಟಿಎಂಸಿ ನೀರನ್ನು ಬಿಡುಗಡೆ ಮಾಡಿದೆ. ಮಾರ್ಚ್ ನಿಂದ ಮೇಯವರೆಗೆ ತಮಿಳುನಾಡು ಪ್ರತಿ ತಿಂಗಳಿಗೆ 2.5 ಟಿಎಂಸಿ ನೀರನ್ನು ಪಡೆದುಕೊಳ್ಳುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸಾರ್ವಜನಿಕ ಇಲಾಖೆ ಹಿರಿಯ ಎಂಜಿನಿಯರ್ ಒಕ್ಕೂಟದ ಕಾರ್ಯದರ್ಶಿ ಎ.ವೀರಪ್ಪನ್, ಕಾವೇರಿ ನೀರಿಗಾಗಿ ಕರ್ನಾಟಕವನ್ನೇ ಅವಲಂಬಿಸುವ ಬದಲು ತಮಿಳುನಾಡು ಸರ್ಕಾರ ಆಂತರಿಕ ಜಲ ಸಂಪನ್ಮೂಲದತ್ತೆ ಕೇಂದ್ರೀಕರಿಸಬೇಕು. ನಾವು ನಮ್ಮ ಪಾಲಿನ ನೀರಿನ ಹಕ್ಕಿಗಾಗಿ ಹೋರಾಡಬೇಕು. ಆದರೆ ಈ ವರ್ಷ ಕರ್ನಾಟಕ ಸಾಕಷ್ಟು ನೀರು ಪೂರೈಕೆ ಮಾಡುವ ಸ್ಥಿತಿಯಲ್ಲಿಲ್ಲ. ಮುಂದಿನ ದಿನಗಳಲ್ಲಿ ನೆರೆ ಬಂದಾಗ ನೀರು ಹರಿದು ಸಾಗರ ತಲುಪುವುದನ್ನು ತಡೆಯಬೇಕು. ಹಾಗಾದರೆ ಮಾತ್ರ ಪರಿಸ್ಥಿತಿಯನ್ನು ಸುಧಾರಿಸಬಹುದು ಎನ್ನುತ್ತಾರೆ ವೀರಪ್ಪನ್.