ಬೆಂಗಳೂರು: ಅತ್ಯಾಚಾರಕ್ಕೀಡಾಗಿ ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಿಣಿಯಾಗಿದ್ದ ಬಾಲಕಿಯೋರ್ವಳ ಜೀವಕ್ಕೆ ಅಪಾಯವಾದ್ದರಿಂದ ಗರ್ಭಪಾತದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
2015ರಲ್ಲಿ ತಾಯಿಯೊಬ್ಬಳು ತನ್ನ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ದುಷ್ಕರ್ಮಿಯೋರ್ವ ಸತತ ಅತ್ಯಾಚಾರ ಮಾಡಿದ್ದು, ಪುತ್ರಿ ಈಗ 25 ವಾರಗಳ ಗರ್ಭಿಣಿಯಾಗಿದ್ದಾಳೆ. ಹೀಗಾಗಿ ಅವಳ ಭವಿಷ್ಯದ ಉದ್ದೇಶದಿಂದ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಎಸ್ ಬೋಪಣ್ಮ ಅವರು, ಅತ್ಯಾಚಾರಕ್ಕೆ ಈಡಾಗಿ ಗರ್ಭ ಧರಿಸಿರುವ 15 ವರ್ಷದ ಬಾಲಕಿಯ ಗರ್ಭಪಾತ ಕಾರ್ಯ ಸಾಧುವೇ ಎಂಬುದನ್ನು ಪರಿಶೀಲಿಸುವಂತೆ ಹೈಕೋರ್ಟ್ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯರಿಗೆ ಸೂಚಿಸಿತ್ತು.
ಅದರಂತೆ ಕೆಸಿ ಜನರಲ್ ಆಸ್ಪತ್ರೆಯ ವೈದ್ಯರಾದ ಡಾ.ಕೆವಿ ಮಾಲಿನಿ, ಡಾ.ಪಿ.ಕಸ್ತೂರಿ ಮತ್ತು ಡಾ.ರಮೇಶ್ ತಂಬತ್ ಅವರ ನೇತೃತ್ವದ ತಂಡ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿ ಹೈಕೋರ್ಟ್ ಗೆ ವರದಿ ನೀಡಿದೆ. ವರದಿಯಲ್ಲಿ ಬಾಲಕಿ ಇದೀಗ 28 ತಿಂಗಳ ಗರ್ಭಿಣಿಯಾಗಿದ್ದು, ಆಕೆಯನ್ನು ಗರ್ಭಪಾತಕ್ಕೆ ಒಳಪಡಿಸುವುದರಿಂದ ಆಕೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. 11 ತಿಂಗಳ ಹಿಂದೆ ಅಂದರೆ ಬಾಲಕಿ 17 ತಿಂಗಳ ಗರ್ಭಿಣಿಯಾಗಿದ್ದಾಗ ಗರ್ಭಪಾತ ಮಾಡಬಹುದಿತ್ತು. ಆದರೆ ಈಗ ಗರ್ಭಪಾತ ಬಾಲಕಿಯ ಆರೋಗ್ಯಕ್ಕೆ ಹಾನಿಕಾರ ಎಂದು ಹೇಳಲಾಗಿತ್ತು.
ವೈದ್ಯರ ವರದಿಯನ್ನಾಧರಿಸಿದ ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರು, ಗರ್ಭಪಾತ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದರು.
2015ರಲ್ಲಿ ಲಗ್ಗೆರೆಯ ನಿವಾಸಿಯಾಗಿರುವ ಮಹಿಳೆ ತನ್ನ 15 ವರ್ಷದ ಮಗಳ ಮೇಲೆ 30 ವರ್ಷದ ಹನುಮಂತಪ್ಪ ಎಂಬ ವ್ಯಕ್ತಿ ಅಪಹರಣ ಮಾಜಿ ಅತ್ಯಾಚಾರ ಮಾಡಿ ಅಕೆ ಗರ್ಭಿಣಿಯಾಗುವಂತೆ ಮಾಡಿದ್ದ ಎಂದು ಆರೋಪಿಸಿದ್ದಳು. ಅಲ್ಲದೆ ಮಗಳ ಗರ್ಭಪಾತ ಮಾಡುವಂತೆ ಆಸ್ಪತ್ರೆಗಳಿಗೆ ದಾಖಲಿಸಿದರೆ ವೈದ್ಯರು ಗರ್ಭಪಾತಕ್ಕೆ ನಿರಾಕರಿಸಿದ್ದರು. ಹೀಗಾಗಿ ಮಹಿಳೆ ಹೈಕೋರ್ಟ್ ನಲ್ಲಿ ಗರ್ಭಪಾತಕ್ಕೆ ಅರ್ಜಿ ಸಲ್ಲಿಸಿದ್ದರು.