ಬೆಂಗಳೂರು: ಬಿಜೆಪಿ ತೊರೆದಿರುವ ಹಲವು ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆ ತರಲು ಪಕ್ಷದ ನೂತನ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಚಿಂತನೆ ನಡೆಸಿದ್ದು, ಪಕ್ಷದ ನಾಯಕರ ಜತೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ವಿ.ಧನಂಜಯ ಕುಮಾರ್ ಅವರು ಇಂದು ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಶುಭ ಕೋರಿದರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಪಕ್ಷ ಸೇರುವ ಎಲ್ಲರಿಗೂ ಸ್ವಾಗತವಿದೆ, ಪಕ್ಷದ ಬಾಗಿಲು ಸದಾ ತೆರೆದಿದೆ ಎಂದರು.
ಬಿಜೆಪಿ ತೊರೆದ ವಿಧಾನ ಪರಿಷತ್ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಧನಂಜಯ ಕುಮಾರ್ ಸೇರಿದಂತೆ ಹಲವು ನಾಯಕರನ್ನು ಮತ್ತೆ ಪಕ್ಷಕ್ಕೆ ಸೇರಿಸಕೊಳ್ಳುವ ಇಂಗಿತ ವ್ಯಕ್ತಪಡಿಸಿರುವ ಬಿಎಸ್ ವೈ, ಜಿಲ್ಲಾ ಘಟಕದ ಮುಖಂಡರು ಹಾಗೂ ರಾಜ್ಯ ನಾಯಕರೊಂದಿಗೆ ಚರ್ಚಿಸಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು, ಅಲ್ಲದೆ ಹಳೆಯದನ್ನು ಮರೆತು ಪಕ್ಷವನ್ನು ಬಲಪಡಿಸಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಉದ್ದೇಶ ತಮ್ಮದು ಎಂದರು.
ಇನ್ನು ಈ ವೇಳೆ ಮಾತನಾಡಿದ ಧನಂಜಯ ಕುಮಾರ್, ನನ್ನ ಮನಸ್ಸಿನಲ್ಲಿರುವುದು ಬಿಜೆಪಿ ಸಿದ್ಧಾಂತ ಮಾತ್ರ, ಬಿಎಸ್ ವೈ ಬಯಸಿದರೆ ಅವರ ಜತೆ ದುಡಿಯಲು ಸಿದ್ಧನಿದ್ದೇನೆ. ಯಡಿಯೂರಪ್ಪ ಜನಪ್ರಿಯ ನಾಯಕರು ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದರು.