ಕರ್ನಾಟಕ

ಯಾವುದೇ ತನಿಖೆಗೆ ಸಿದ್ಧ-ಸಿದ್ದು ಲ್ಯಾಬ್ ಟೆಂಡರ್ ಪ್ರಕರಣ

Pinterest LinkedIn Tumblr

Siddu-2ರಾಯಚೂರು, ಏ. ೧೭- ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲ್ಯಾಬ್ ನಿರ್ವಹಣೆ ಟೆಂಡರ್ ಪ್ರಕರಣದಲ್ಲಿ ಕಾನೂನು ರೀತಿ ತನಿಖೆ ನಡೆಸಿ, ಯಾವುದೇ ಕ್ರಮ ಕೈಗೊಂಡರೂ, ತಮ್ಮ ಆಕ್ಷೇಪವಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ನಗರದ ವಿವಿಐಪಿ ಪ್ರವಾಸ ಮಂದಿರದಲ್ಲಿ ಮಾತನಾಡುತ್ತಾ, ಈ ಹಿಂದೆ ವಿರೋಧ ಪಕ್ಷದವರು ಅನಗತ್ಯವಾಗಿ ತಮ್ಮ ವಿರುದ್ಧ ವಾಚ್ ಪ್ರಕರಣ ಎತ್ತುವ ಮೂಲಕ ವಿವಾದ ಸೃಷ್ಟಿಸಲು ಪ್ರಯತ್ನಿಸಿದರು. ಇದರಿಂದ ಯಾವುದೇ ರಾಜಕೀಯ ಲಾಭವಾಗದಿರುವುದರಿಂದ ಮತ್ತೆ ರಾಜಕೀಯ ದುರುದ್ದೇಶದಿಂದ ತಮ್ಮ ಮಗನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ.
ತಮ್ಮ ಪುತ್ರ ಪ್ಯಾಥೋಲೊಜಿಸ್ಟ್ ವೈದ್ಯಕೀಯ ವೃತ್ತಿಯನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿದ್ದಾರೆ. 2009 ರಲ್ಲಿ ಮ್ಯಾಟ್ರಿಕ್ ಸೆಲ್ಯೂಷನ್ ಎನ್ನುವ ಸಂಸ್ಥೆಯನ್ನು ರೇಡಿಯೋಲೊಜಿಸ್ಟ್ ಡಾ.ರಾಜಶೇಖರಗೌಡ ಎಂಬುವರು ಸ್ಥಾಪಿಸಿದರು. ಇದರಲ್ಲಿ 2014 ರಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದರು. ಇತ್ತೀಚಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಖಾಸಗಿ ಲ್ಯಾಬ್ ಸ್ಥಾಪನೆ ಮತ್ತು ನಿರ್ವಹಣೆಗೆ ಟೆಂಡರ್ ಕರೆಯಲಾಗಿತ್ತು.
ರಾಜೇಶಗೌಡ ಅವರ ಮ್ಯಾಟ್ರಿಕ್ ಸೆಲ್ಯೂಷನ್ ಸಂಸ್ಥೆಯಿಂದ ಟೆಂಡರ್ ಹಾಕಲಾಗಿತ್ತು. ಕಡಿಮೆ ಟೆಂಡರ್ ನಮೂದಿಸಿದ್ದರಿಂದ ಈ ಸಂಸ್ಥೆಗೆ ಗುತ್ತಿಗೆ ವಹಿಸಿಕೊಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಪ್ರಭಾವ ಪ್ರಸಂಗ ಉದ್ಭವಿಸಿಲ್ಲ. ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣುಪ್ರಕಾಶ ಪಾಟೀಲ್ ಅವರಿಗೆ ಈ ಕುರಿತು ತನಿಖೆ ನಡೆಸಿ ಯಾವುದೇ ಲೋಪದೋಷಗಳಿದ್ದರೆ ತಕ್ಷಣವೇ ಅದನ್ನು ರದ್ದುಪಡಿಸುವಂತೆಯೂ ಸೂಚಿಸಲಾಗಿದೆ.
ಖಾಸಗಿ ಲ್ಯಾಬ್ ನಿರ್ವಹಣೆ ಟೆಂಡರ್‌ನಲ್ಲಿ ಸ್ಪಷ್ಟವಾಗಿ ಷರತ್ತುಗಳನ್ನು ವಿಧಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸರ್ಕಾರ ದರದಲ್ಲಿ ನಡೆಸುವ ಲ್ಯಾಬ್ ಪ್ರಯೋಗಾಲಯದ ದರಕ್ಕಿಂತ ಶೇ.15 ರಿಂದ 20 ಕಡಿಮೆ ದರದಲ್ಲಿ ತಪಾಸಣೆ ಕೈಗೊಳ್ಳಬೇಕೆಂದು ನಿಯಮ ವಿಧಿಸಲಾಗಿದೆ. ಇದರ ಸಂಪೂರ್ಣ ಮಾಹಿತಿಯಿದ್ದರೂ, ವಿರೋಧ ಪಕ್ಷಗಳು ದುರುದ್ದೇಶ ಪೂರ್ವಕವಾಗಿ ತಪ್ಪು ಮಾಹಿತಿ ನೀಡುವ ಮೂಲಕ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ನೈತಿಕ ನೀತಿ ಸಂಹಿತೆ ಉಲ್ಲಂಘನೆ ಪ್ರಶ್ನೆ ಉದ್ಭವಿಸುವುದಿಲ್ಲ. ತಮ್ಮ ಪುತ್ರ ತಮ್ಮನ್ನು ಅವಲಂಬಿಸಿಲ್ಲ. ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನೈತಿಕ ನೀತಿ ಸಂಹಿತೆ ಉಲ್ಲಂಘನೆ ವಿಷಯ ಎಲ್ಲಿಂದ ಉದ್ಭವಾಗುತ್ತದೆ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರದ ಮೂರು ವರ್ಷದ ಆಡಳಿತಾವಧಿಯಲ್ಲಿ ಯಾವುದೇ ಹಗರಣಗಳು ನಡೆಯದಿರುವುದರಿಂದ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜಾದಳ ಕಾನೂನು ಬದ್ಧ ವಿಷಯ ವಿವಾದಕ್ಕೆ ಗುರಿ ಮಾಡುವ ಪ್ರಯತ್ನ ನಡೆಸಿದ್ದಾರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣುಪ್ರಕಾಶ ಪಾಟೀಲ್, ಕೃಷಿ ಸಚಿವ ಕೃಷ್ಣ ಭೈರೇಗೌಡ, ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು, ಸಂಸದ ಬಿ.ವಿ.ನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ವಸಂತಕುಮಾರ ಉಪಸ್ಥಿತರಿದ್ದರು.

Write A Comment