ರಾಯಚೂರು.ಏ.17- ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿ ಇನ್ನು 5 ವರ್ಷಗಳ ಕಾಲ ಮುಂದುವರೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಡಾ.ನಂಜುಂಡಪ್ಪ ವರದಿಯಾಧರಿಸಿ ಪ್ರಾದೇಶಿಕ ಅಸಮತೋಲನೆಗೆ ಗುರಿಯಾದ 114 ತಾಲೂಕಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. 114 ತಾಲೂಕಗಳಲ್ಲಿ ಅತಿ ಹೆಚ್ಚು ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿವೆ. 8 ವರ್ಷಗಳಲ್ಲಿ 16 ಸಾವಿರ ಕೋಟಿ ಬಳಕೆ ಮಾಡಲಾಗಿದೆ. ಈಗ ಈ ಸಮಿತಿಯ ಅವಧಿ ಮುಗಿದಿದೆ. ಪುನಃ ಅನುಷ್ಠಾನ ಸಮಿತಿಯ ಅವಧಿ 5 ವರ್ಷಕ್ಕೆ ವಿಸ್ತೀರಿಸಲು ತೀರ್ಮಾನಿಸಲಾಗಿದೆ.
ಪ್ರತಿ ವರ್ಷ 3 ಸಾವಿರ ಕೋಟಿ ಅನುದಾನ ಬಳಸಲು ಉದ್ದೇಶಿಸಲಾಗಿದೆ. ಹೈದ್ರಾಬಾದ್ ಕರ್ನಾಟ ಪ್ರದೇಶದ 1 ಸಾವಿರ ಕೋಟಿ ಹೊರತುಪಡಿಸಿ, ಈ ಅನುದಾನ ಬಳಕೆ ಮಾಡಲಾಗುತ್ತದೆ. ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಸಾಲದ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಸಾಲ ಮಾಡಿದರೂ, ವಿತ್ತಿಯ ಹೊಣೆಗಾರಿಕೆ ಕಾಯ್ದೆ ಉಲ್ಲಂಘಿಸಿಲ್ಲ ಎನ್ನುವುದು ಬಿಜೆಪಿ ಮುಖಂಡರು ತಿಳಿಯುವ ಅಗತ್ಯವಿದೆ.
ವಿತ್ತಿಯ ಕೊರತೆ ಶೇ.3 ರಷ್ಟು ಮಾತ್ರ ಇರಬೇಕೆನ್ನುವುದು ಕಾಯ್ದೆ ನಿಯಮ. 2016 ರಲ್ಲಿ ರಾಜ್ಯದ ವಿತ್ತಿಯ ಕೊರತೆ ಶೇ.2.12 ರಷ್ಟು ಮಾತ್ರವಿದೆ. ಆದರೆ, ಬಿ.ಎಸ್.ಯಡಿಯೂರಪ್ಪ ಸರಕಾರದಲ್ಲಿ ವಿತ್ತಿಯ ಕೊರತೆ ಶೇ.3 ರ ಸಂಖ್ಯೆ ದಾಟಿದೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ರೈತರ ಸಾಲ ಮನ್ನಾ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 30 ಸಾವಿರ ಕೋಟಿ ಕೃಷಿಕರು ಸಾಲ ಪಡೆದಿದ್ದಾರೆ.
ಸಹಕಾರ ಬ್ಯಾಂಕ್‌ಗಳಿಂದ 10 ಸಾವಿರ ಕೋಟಿ ಸಾಲ ನೀಡಲಾಗಿದೆ. ಚುನಾವಣೆ ನಿಮಿತ್ಯ ಈ ಹಿಂದೆ ಬಿಜೆಪಿ ತರಾತುರಿಯಲ್ಲಿ ಘೋಷಿಸಿದ ಸಾಲ ಮನ್ನಾ ಯೋಜನೆಯ ಹಣವನ್ನು ಕಾಂಗ್ರೆಸ್ ಸರಕಾರ ತುಂಬಿಕೊಡಬೇಕಾಯಿತು. ಈಗ ಮತ್ತೆ ಸಾಲ ಮನ್ನಾ ಮಾಡಬೇಕೆನ್ನುವುದು ಕಷ್ಟಸಾಧ್ಯತೆ ಬಗ್ಗೆ ರೈತರಿಗೆ ಮನವನರಿಕೆ ಮಾಡಿಕೊಟ್ಟಿರುವುದಾಗಿ ಹೇಳಿದರು. ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ 1.07 ಕೋಟಿ ಕುಟುಂಬಗಳಿಗೆ ಅಕ್ಕಿ ವಿತರಿಸುತ್ತಿದೆಂದು ಹೇಳಿದ ಅವರು, ರಾಜ್ಯ ಸರ್ಕಾರ ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತ ನಿರ್ವಹಣೆಗೆ ವಿಶೇಷ ಗಮನ ನೀಡುತ್ತಿದೆಂದು ಹೇಳಿದರು.
ಕರ್ನಾಟಕ