ಬೆಂಗಳೂರು, ಏ.17- ಸರ್ಕಾರಿ, ಅನುದಾನಿತ ಪ್ರೌಢಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಜತೆಗೆ ಈಗಾಗಲೇ ಪಡೆಯಯುತ್ತಿರುವ ವಿಶೇಷ ಭತ್ಯೆಯನ್ನೂ ಮುಂದುವರಿಸಲಾಗಿದೆ. 2008ರ ಆಗಸ್ಟ್ 1ರ ಪೂರ್ವದಲ್ಲಿ ನೇಮಕಗೊಂಡಿರುವ ಶಿಕ್ಷಕರಿಗೆ ಮತ್ತು ಮುಖ್ಯಶಿಕ್ಷಕರಿಗೆ ನೀಡಲಾಗುವ 400 ರೂ.ಗಳ ವಿಶೇಷ ಭತ್ಯೆ ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದೆ.
ವೇತನ ಶ್ರೇಣಿ ಅಂತಿಮ ಹಂತ ತಲುಪಿರುವ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಕೂಡ ಹೆಚ್ಚುವರಿ ವೇತನ ಬಡ್ತಿ ಪಡೆಯಲು ಅರ್ಹರು. ಮುಂದಿನ ಜೂನ್ ತಿಂಗಳ ವೇತನದಿಂದ ಇದು ಜಾರಿಗೆ ಬರಲಿದೆ. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಮಾಸಿಕ ಒಂದು ಸಾವಿರ ರೂ.ಗಳ ವಿಶೇಷ ಭತ್ಯೆ ಮಂಜೂರು ಮಾಡಿದ್ದು, ಒಂದು ಹೆಚ್ಚುವರಿ ಭತ್ಯೆ ಹಾಗೂ ವಿಶೇಷ ಭತ್ಯೆ ಜೂನ್ ತಿಂಗಳಿನಿಂದ ಜಾರಿಗೆ ಬರಲಿದೆ. ಈ ಸೌಲಭ್ಯ ವೇತನಾನುದಾನಕ್ಕೆ ಒಳಪಟ್ಟಿರುವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೂ ಅನ್ವಹಿಸಲಿದೆ.
ಶಿಕ್ಷಕರ ಸಂಘದ ಇತರೆ ಬೇಡಿಕೆಗಳನ್ನು ಮುಂದಿನ ವೇತನ ಸಮಿತಿ ಅಥವಾ ವೇತನ ಆಯೋಗದ ಮುಂದೆ ಮಂಡಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.