ಬೆಂಗಳೂರು, ಏ.19- ರೋಮ್ ಹೊತ್ತಿ ಉರಿಯುವಾಗ ದೊರೆ ಪಿಟೀಲು ಕುಯ್ಯುತ್ತಿದ್ದ ಎನ್ನುವಂತಾಗಿದೆ ರಾಜ್ಯದ ಪರಿಸ್ಥಿತಿ. ಏಕೆಂದರೆ, ರಾಜ್ಯದ 25 ಜಿಲ್ಲೆಗಳ 140ಕ್ಕೂ ಹೆಚ್ಚು ತಾಲೂಕುಗಳಲ್ಲಿ ಕುಡಿಯುವ ನೀರು, ವಿದ್ಯುತ್, ಜಾನುವಾರುಗಳಿಗೆ ಮೇವು ಇಲ್ಲದೆ ಪರದಾಡುವಂತಾಗಿದೆ. ಶತಮಾನಗಳಲ್ಲೇ ಕಂಡರಿಯದ ಭೀಕರ ಬರಗಾಲಕ್ಕೆ ತುತ್ತಾಗಿರುವ ರಾಜ್ಯದಲ್ಲಿ ಜನತೆಯ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವರುಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಜನರ ಸಂಕಷ್ಟಗಳನ್ನು ಕಾಟಾಚಾರಕ್ಕೆ ಆಲಿಸಿದರು. ಈ ವೇಳೆ ಮುಖ್ಯಮಂತ್ರಿ ಕೆಂಗಣ್ಣಿಗೆ ಗುರಿಯಾಗಬಾರದೆಂಬ ಕಾರಣಕ್ಕಾಗಿ ಒಲ್ಲದ ಮನಸ್ಸಿನಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಅವರಿಗೆ ಸಾಥ್ ನೀಡಿದರು. ಉಳಿದಂತೆ ರಾಜ್ಯದ ಇತರೆ ಭಾಗಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೂ ಭೇಟಿ ನೀಡದಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಗಳ ಜತೆ ಕೃಷಿ ಸಚಿವ ಕೃಷ್ಣಭೈರೇಗೌಡ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಖಮರುಲ್ ಇಸ್ಲಂ ಬರ ಪೀಡಿತ ಸ್ಥಳಗಳಿಗೆ ಭೇಟಿ ಕೊಟ್ಟರು. ಸ್ವತಃ ರಾಜ್ಯ ಸರ್ಕಾರವೇ ಘೋಷಣೆ ಮಾಡಿರುವಂತೆ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಯಾದಗಿರಿ, ಬಾಗಲಕೋಟೆ, ವಿಜಯಪುರ, ತುಮಕೂರು ಸೇರಿದಂತೆ ಮತ್ತಿತರ ಜಿಲ್ಲೆಗಳ ಬರ ಪೀಡಿತ ಸ್ಥಳಗಳಿಗೆ ಸಚಿವರು, ಶಾಸಕರು, ಅಧಿಕಾರಿಗಳು ಕನಿಷ್ಟ ಪಕ್ಷ ಒಮ್ಮೆಯಾದರೂ ಭೇಟಿ ಕೊಟ್ಟಿಲ್ಲ.
ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಪರಿಸ್ಥಿತಿಯಂತೂ ಊಹೆಗೂ ನಿಲುಕದಂತಿದೆ. ಇಲ್ಲಿ ಈ ಬಾರಿ ಬಿಸಿಲಿನ ತಾಪ 42 ಡಿಗ್ರಿ ಸೆಲ್ಷಿಯಸ್ ದಾಟಿದೆ. ಮಕ್ಕಳು, ವಯೋವೃದ್ಧರು, ಮಹಿಳೆಯರು, ಗರ್ಭಿಣಿಯರ ಪಾಡಂತೂ ದೇವರಿಗೇ ಪ್ರೀತಿ. ವಾರಕ್ಕೆ ಒಂದು ಇಲ್ಲವೆ ಎರಡು ಬಾರಿ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತದೆ. ಇದನ್ನೇ ಕಾಮಧೇನು, ಕಲ್ಪವೃಕ್ಷ ಎಂಬಂತೆ ಜನರು ಒಂದು ವಾರಕ್ಕೆ ಸಾಕಾಗುವಷ್ಟು ನೀರನ್ನು ಹಿಡಿದಿಟ್ಟುಕೊಂಡು ಜೀವನ ಸಾಗಿಸಬೇಕು. ಇಂತಹ ವಿಷಮ ಪರಿಸ್ಥಿತಿಯಲ್ಲೂ ಜನಪ್ರತಿನಿಧಿಗಳು ಇಲ್ಲವೆ ಜಿಲ್ಲಾ ಉಸ್ತುವಾರಿ ಸಚಿವರು ಅವರ ಕಷ್ಟ-ಸುಖಗಳಿಗೆ ಸ್ಪಂದಿಸದಿರುವುದು ನಾಚಿಕೆಗೇಡಿನ ಸಂಗತಿ.
ಬೆಂಗಳೂರಿನಲ್ಲೇ ಠಿಕಾಣಿ ಹೂಡುವ ಸಚಿವರುಗಳು ಕಡೆ ಪಕ್ಷ ತಮಗೆ ನಿಗದಿಪಡಿಸಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಅವರ ಅಹವಾಲುಗಳನ್ನು ಸ್ವೀಕರಿಸಬೇಕು. ಸಚಿವರುಗಳಿಗೆ ಮುಖ್ಯಮಂತ್ರಿ ನೀಡಿರುವ ಅತಿ ಸಲುಗೆಯೇ ಇದಕ್ಕೆ ಕಾರಣ ಎಂಬ ಮಾತು ಕೇಳಿಬರುತ್ತಿದೆ.ಕೋಲಾರ, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್, ರೋಷನ್‌ಬೇಗ್, ಬೆಂಗಳೂರಿನಲ್ಲೇ ತಳ ಊರುತ್ತಾರೆಯೇ ಹೊರತು ಅಪ್ಪಿತಪ್ಪಿ ಜಿಲ್ಲೆಗಳಿಗೆ ಭೇಟಿ ನೀಡುವುದಿಲ್ಲ.
ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್‌ಗೆ ಮುಖ್ಯಮಂತ್ರಿ ಅಕ್ಕಪಕ್ಕ ನಿಲ್ಲುವುದೇ ಕರ್ತವ್ಯ ಎನಿಸಿಬಿಟ್ಟಿದೆ. ತಮ್ಮ ತವರು ಕ್ಷೇತ್ರ ಚಾಮರಾಜನಗರ ಜಿಲ್ಲೆ ಬರ ಪೀಡಿತ ಎಂದು ಘೋಷಿಸಿದರೂ ಸಚಿವರು ಬೆಂಗಳೂರು ಬಿಟ್ಟು ಕದಲುತ್ತಿಲ್ಲ. ಕಲ್ಪತರು ನಾಡು ತುಮಕೂರಿನಲ್ಲಿ ಜಯಚಂದ್ರ ನಾಮಕಾವಸ್ಥೆಗೆ ಒಂದೆರಡು ಬಾರಿ ಭೇಟಿ ನೀಡಿದರೇ ಹೊರತು ಉಳಿದಂತೆ ಈವರೆಗೂ ಜಿಲ್ಲಾ ಪ್ರವಾಸವನ್ನೇ ಕೈಗೊಂಡಿಲ್ಲ.
ಬರಗಾಲ ಎದುರಾದ ಸಂದರ್ಭದಲ್ಲಿ ಕಂದಾಯ ಸಚಿವರ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಆದರೆ, ವಿ.ಶ್ರೀನಿವಾಸ ಪ್ರಸಾದ್ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಇದು ಕೇವಲ ಶ್ರೀನಿವಾಸ ಪ್ರಸಾದ್ ಒಬ್ಬರ ಕಥೆಯಲ್ಲ, ಇದೇ ರೀತಿ ಸಚಿವರಾದ ಶಾಮನೂರು ಶಿವಶಂಕರಪ್ಪ, ಪರಮೇಶ್ವರ್ ನಾಯಕ್, ಸತೀಶ್ ಜಾರಕಿಹೊಳಿ, ವಿನಯ್ ಕುಲಕರ್ಣಿ, ಉಮಾಶ್ರೀ ಸೇರಿದಂತೆ ಬಹುತೇಕ ಸಚಿವರು ಬರಗಾಲ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.