ಕರ್ನಾಟಕ

ರಾಜಧಾನಿ ಬೆಂಗಳೂರಿನಲ್ಲಿ ಮೂರು ದಿನ ನಿಷೇಧಾಜ್ಞೆ

Pinterest LinkedIn Tumblr

bang

ಬೆಂಗಳೂರು: ಸಿದ್ಧ ಉಡುಪು ಕಾರ್ಖಾನೆ ನೌಕರರ ಪ್ರತಿಭಟನೆಯ ಕಾರಣ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಎನ್‌.ಎಸ್.ಮೇಘರಿಕ್ ಆದೇಶ ಹೊರಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಮವಾರ ನಡೆದ ಪ್ರತಿಭಟನೆಯಲ್ಲಿ ಸುಮಾರು ಒಂದು ಲಕ್ಷ ಕಾರ್ಮಿಕರು ಪಾಲ್ಗೊಂಡಿದ್ದರು. ಮಂಗಳವಾರ ಒಂದೂಕಾಲು ಲಕ್ಷ ಕಾರ್ಮಿಕರು ಹೋರಾಟ ಪ್ರಾರಂಭಿಸಿದರು. ಇವರಲ್ಲಿ ಶೇ 80ರಷ್ಟು ಮಹಿಳೆಯರೇ ಇದ್ದ ಕಾರಣ ನಾವೂ ತಾಳ್ಮೆಯಿಂದ ಇದ್ದೆವು. ಆದರೆ, ಮಧ್ಯಾಹ್ನ 2 ಗಂಟೆ ಬಳಿಕ ಜಾಲಹಳ್ಳಿ ಕ್ರಾಸ್‌ನಲ್ಲಿ ಕೆಲ ಪುಂಡರು ಬಸ್‌ಗಳಿಗೆ ಬೆಂಕಿ ಹಚ್ಚಿದರು. ಆ ನಂತರ ಪ್ರತಿಭಟನೆ ಹಿಂಸೆಗೆ ತಿರುಗಿತು’ ಎಂದು ಹೇಳಿದರು.

‘ವಿನಾಕಾರಣ ಗಲಭೆ ಸೃಷ್ಟಿಸಿ ಸಾರ್ವಜನಿಕರ ಆಸ್ತಿಗೆ ಹಾನಿ ಉಂಟು ಮಾಡಿದ ಸಂಬಂಧ 38 ಪ್ರಕರಣಗಳನ್ನು ದಾಖಲಿಸಲಾಗಿದೆ. ಮೂವರು ಮಹಿಳೆಯರು ಸೇರಿದಂತೆ 116 ಮಂದಿಯನ್ನು ಬಂಧಿಸಲಾಗಿದೆ. ಹಿಂಸೆ ಮರುಕಳಿಸಬಾರದೆಂದು ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’.

‘ಉದ್ರಿಕ್ತರು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯ ಆರು ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. 14 ಪೊಲೀಸ್ ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಅಷ್ಟೆ ಅಲ್ಲದೆ, ಕಲ್ಲು ತೂರಾಟದಿಂದ 95 ವಾಹನಗಳು ಜಖಂ ಆಗಿವೆ. 43 ಪೊಲೀಸರು ಹಾಗೂ 37 ಕಾರ್ಮಿಕರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರದ ಜತೆಗೆ ನೂರಕ್ಕೂ ಹೆಚ್ಚು ಅಶ್ರುವಾಯು ಸೆಲ್‌ಗಳನ್ನು ಸಿಡಿಸಲಾಗಿದೆ’.

ವ್ಯಾಪ್ತಿ ನಮ್ಮದಲ್ಲ: ‘ಹೆಬ್ಬಗೋಡಿ ಕಮಿಷನರೇಟ್ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಮೂವರು ಡಿಸಿಪಿಗಳ ನೇತೃತ್ವದಲ್ಲಿ ಸಿಬ್ಬಂದಿಯನ್ನು ಅಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ನೇಮಿಸಿದ್ದೆವು. 52 ಕೆಎಸ್‌ಆರ್‌ಪಿ, 30 ಸಿಎಆರ್, ಗೃಹರಕ್ಷಕ ದಳ ಹಾಗೂ ನಗರದ ಅಷ್ಟೂ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.’

‘ಗಲಭೆ ಹೆಚ್ಚಾಗಿರುವುದು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ. ಹೀಗಾಗಿ ನಮ್ಮಿಂದ ಯಾವುದೇ ವೈಫಲ್ಯವಾಗಿಲ್ಲ’ ಎಂದು ಮೇಘರಿಕ್ ತಿಳಿಸಿದರು.

ಸಮನ್ವಯದ ಕೊರತೆ: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪೊಲೀಸರ ನಡುವೆ ಸಮನ್ವಯತೆ ಇಲ್ಲದಿರುವುದು ಪ್ರತಿಭಟನೆ ವಿಕೋಪಕ್ಕೆ ಹೋಗಲು ಮುಖ್ಯ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಸೋಮವಾರ ಬನ್ನೇರುಘಟ್ಟ ರಸ್ತೆಯಲ್ಲಿ ಪ್ರತಿಭಟನೆ ನಡೆದಿತ್ತು. ಹೆಬ್ಬಗೋಡಿಯಲ್ಲೂ ಹೋರಾಟ ಹಿಂಸೆಗೆ ತಿರುಗಿತ್ತು. ಹೀಗಾಗಿ ಬೆಂಗಳೂರು ಗ್ರಾಮಾಂತರ ಹಾಗೂ ನಗರ ಪೊಲೀಸರು ಒಟ್ಟಾಗಿ ಮರುದಿನಕ್ಕೆ ಸಿದ್ಧರಾಗಬೇಕಿತ್ತು. ತಮ್ಮ ‘ವ್ಯಾಪ್ತಿ’ಗೆ ಸೀಮಿತರಾಗಿ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ’ ಎಂಬ ಮಾತುಗಳು ಪೊಲೀಸ್ ವಲಯದಲ್ಲೇ ಕೇಳಿ ಬಂದಿವೆ.
*
ಇಂದು ಆರ್‌ಎಎಫ್!
‘ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಆದರೂ, ಮುಂಜಾಗ್ರತಾ ಕ್ರಮವಾಗಿ ಕ್ರಿಪ್ರ ಕಾರ್ಯ ಪಡೆಯ (ಆರ್‌ಎಎಫ್‌) ಎರಡು ತುಕಡಿಗಳನ್ನು ಕೊಯಮತ್ತೂರಿನಿಂದ ಕರೆಸಲಾಗುತ್ತಿದೆ’ ಎಂದು ಮೇಘರಿಕ್ ಹೇಳಿದರು.
*
ಪತ್ರಕರ್ತರ ಮೇಲೆ ಹಲ್ಲೆ
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಗಳಲ್ಲಿ ವರದಿ ಮಾಡುತ್ತಿದ್ದ ಟಿ.ವಿ,  ಪತ್ರಿಕೆಗಳ ವರದಿಗಾರರು ಹಾಗೂ ಛಾಯಾಗ್ರಾಹಕರ ಮೇಲೂ ಪ್ರತಿಭಟನಾನಿರತ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ. ಕೆಪಿಎನ್ ಮುಖ್ಯ ಛಾಯಾಗ್ರಾಹಕ ಸಾಗ್ಗೆರೆ ರಾಧಾಕೃಷ್ಣ ಅವರು ತುಮಕೂರು ರಸ್ತೆಯ ಜಾಲಹಳ್ಳಿ ಕ್ರಾಸ್ ಬಳಿ ಪ್ರತಿಭಟನೆಯ ಚಿತ್ರಗಳನ್ನು ತೆಗೆಯುತ್ತಿದ್ದರು. ಈ ವೇಳೆ ಅವರತ್ತ ಬಂದ ಕೆಲ ಕಾರ್ಮಿಕರ ಗುಂಪು ಹಲ್ಲೆ ನಡೆಸಿತು. ನಂತರ ಕ್ಯಾಮೆರಾ ಕಸಿದುಕೊಂಡು ನೆಲಕ್ಕೆ ಬಡಿಯಿತು.

Write A Comment