ಬೆಂಗಳೂರು: ಬೊಮ್ಮಸಂದ್ರದ ಬಳಿ ಮಧ್ಯಾಹ್ನ 1ರ ಸುಮಾರಿಗೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾರ್ಮಿಕರು ರಸ್ತೆ ತಡೆ ನಡೆಸಿದರು. ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮಾಡಿದ ಮನವಿಗೆ ಕಿವಿಗೊಡದ ಪ್ರತಿಭಟನಾಕಾರರು, ಪೊಲೀಸರತ್ತಲೇ ಕಲ್ಲು ತೂರಿದರು.
ಆಗ ಕಾರ್ಮಿಕರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದರು. ಆದರೂ, ಕಲ್ಲು ತೂರಾಟ ನಿಲ್ಲಲಿಲ್ಲ. ಅಂತಿಮವಾಗಿ ಪೊಲೀಸರು ಗಾಳಿಯಲ್ಲಿ ಏಳೆಂಟು ಸುತ್ತು ಗುಂಡು ಹಾರಿಸಿದ್ದರಿಂದ, ಎಲ್ಲರೂ ದಿಕ್ಕಾಪಾಲಾಗಿ ಓಡಿದರು.
ಆಗ ಹೆಬ್ಬಗೋಡಿಯತ್ತ ಓಡಿ ಬಂದ ಐನೂರಕ್ಕೂ ಹೆಚ್ಚು ಮಂದಿ, ರಸ್ತೆ ಬದಿಯಲ್ಲಿದ್ದ ಪೊಲೀಸ್ ಠಾಣೆಯತ್ತ ಕಲ್ಲು ತೂರತೊಡಗಿದರು. ಠಾಣೆಯಲ್ಲಿದ್ದ 12 ಸಿಬ್ಬಂದಿ ಹೊರಬಂದು ಪ್ರತಿಭಟನಾಕಾರರನ್ನು ಓಡಿಸಲು ಮುಂದಾದರು. ಆದರೆ, ಅವರತ್ತಲೂ ಕಲ್ಲುಗಳು ತೂರಿ ಬಂದವು. ಇದರಿಂದಾಗಿ ಐವರು ಗಾಯಗೊಂಡರು.
ಕಲ್ಲು ತೂರಾಟ ತೀವ್ರವಾಗಿದ್ದರಿಂದ ಸಿಬ್ಬಂದಿ ಠಾಣೆಯೊಳಗೆ ಸೇರಿಕೊಂಡು ಬಾಗಿಲು ಹಾಕಿಕೊಂಡರು. ಆಗ ಒಳನುಗ್ಗಿದ ಗುಂಪು, ಠಾಣೆ ಆವರಣದಲ್ಲಿ ನಿಂತಿದ್ದ 4 ಪೊಲೀಸ್ ವಾಹನಗಳು ಸೇರಿ8 ವಾಹನಗಳ ಗಾಜು ಪುಡಿಗೊಳಿಸಿತು.
ನಂತರ ಠಾಣೆಯ ಹಿಂಭಾಗ ನಿಲ್ಲಿಸಿದ್ದ ಜಪ್ತಿ ಮಾಡಿದ ಸುಮಾರು 100ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿತು. ಬೆಂಕಿ ಕಂಡು ಆತಂಕಗೊಂಡ ಸಿಬ್ಬಂದಿ, ಒಳಗಿನಿಂದಲೇ ದಾಂದಲೆ ಮಾಡುತ್ತಿದ್ದವರತ್ತ ಮೂರ್ನಾಲ್ಕು ಸುತ್ತು ಗುಂಡು ಹಾರಿಸಿದರು. ಆಗ ಭಯಗೊಂಡ ಪ್ರತಿಭಟನಾಕಾರರು ಸ್ಥಳದಿಂದ ಚದುರಿದರು.
ವಿಷಯ ತಿಳಿದು ಕೆಲ ಹೊತ್ತಿನಲ್ಲೇ 2 ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಅರ್ಧ ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಘಟನೆಯಲ್ಲಿ 25ಕ್ಕೂ ಹೆಚ್ಚು ಬೈಕ್‌ಗಳು ಹಾಗೂ ಹಳೆಯ ವಾಹನಗಳು ಹಾನಿಗೊಂಡಿವೆ ಎಂದು ಪೊಲೀಸರು ಹೇಳಿದರು.
ಕಲ್ಲೇಟಿನಿಂದ ಗಾಯಗೊಂಡ ಐವರು ಸಿಬ್ಬಂದಿ ಪೈಕಿ, ಮಹಿಳಾ ಕಾನ್‌ಸ್ಟೆಬಲ್ ನಳೀನಾಕ್ಷಿ ಅವರ ತಲೆಗೆ ತೀವ್ರ ಪೆಟ್ಟಾಗಿದೆ. ಸ್ಪರ್ಶ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
*
ತಪ್ಪಿದ ಭಾರಿ ಅನಾಹುತ
‘ಕಿಡಿಗೇಡಿಗಳು ಬೆಂಕಿ ಹಚ್ಚಿದ ವಾಹನಗಳಿದ್ದ ಸ್ಥಳದಲ್ಲೇ, ಇತ್ತೀಚೆಗೆ ಜಪ್ತಿ ಮಾಡಲಾಗಿದ್ದ ಸುಮಾರು 150 ಅಡುಗೆ ಅನಿಲ ಸಿಲಿಂಡರ್‌ಗಳನ್ನು ಇಡಲಾಗಿತ್ತು. ಈ ಪೈಕಿ ಕೆಲವುದರಲ್ಲಿ ಅನಿಲ ಕೂಡ ಇತ್ತು. ಬೆಂಕಿಯ ಕೆನ್ನಾಲಗೆ ಸಿಲಿಂಡರ್‌ಗಳಿದ್ದ ಭಾಗಕ್ಕೆ ಹೊತ್ತಿಕೊಳ್ಳುವಷ್ಟರಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಭಾರಿ ಅನಾಹುತವನ್ನು ತಪ್ಪಿಸಿದರು’ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ. ಹರಿಶೇಖರನ್ ಅವರು ತಿಳಿಸಿದರು.
ಬೊಮ್ಮಸಂದ್ರದಲ್ಲಿ ಪ್ರತಿಭಟನೆ ಜೋರಾಗಿದ್ದರಿಂದ ಎಲ್ಲರೂ ಅಲ್ಲೇ ಬೀಡು ಬಿಟ್ಟಿದ್ದರು. ಹಾಗಾಗಿ ಠಾಣೆಯಲ್ಲಿ ಬೆರಳೆಣಿಕೆಯ ಸಿಬ್ಬಂದಿ ಮಾತ್ರ ಇದ್ದೆವು. ಅಲ್ಲದೆ, ಠಾಣೆ ಮೇಲಿನ ದಾಳಿ ಕುರಿತು ಮಾಹಿತಿ ನೀಡಿದೆವು. ಆದರೆ, ಅವರು ಬರುವಷ್ಟರಲ್ಲಿ ದಾಂದಲೆ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದರು ಎಂದು ಠಾಣೆಯ ಸಿಬ್ಬಂದಿಯೊಬ್ಬರು ತಿಳಿಸಿದರು.