ಬೆಂಗಳೂರು: ನಟಿ ಮಾಲಾಶ್ರೀ ರವರಿಗೆ ಕೆ.ಮಂಜು ಹಾಗೂ ‘ಉಪ್ಪು ಹುಳಿ ಖಾರ’ ಚಿತ್ರದ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಮಾಡಿರುವ ಅವಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಿರ್ಮಾಪಕ ರಾಮು ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ರಾಮು ಹಾಗೂ ಮಾಲಾಶ್ರೀ ಜಂಟಿ ಪತ್ರಿಕಾಗೋಷ್ಠಿ ಕರೆದು ಮಂಜು ಹಾಗೂ ಇಮ್ರಾನ್ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದರು. ಮಂಜು ಮತ್ತು ಸರ್ದಾರಿಯಾ ಅವರಲ್ಲೇ ಗೊಂದಲವಿದ್ದು, ಅದನ್ನು ಬೇರೆಯವರ ಮೇಲೆ ಹಾಕಲು ಹೊರಟಿದ್ದಾರೆ ಎಂದು ಟೀಕಿಸಿದರು.
ಮಾಲಾಶ್ರೀಗೆ ನಟನೆ ಬರುವುದಿಲ್ಲ ಹಾಗೂ ಅವರಿಂದಾಗಿ ಸಿನಿಮಾ ನಿಂತು ಹೋಗಿದೆ ಎನ್ನುವ ಮೂಲಕ ಮಾಲಾಶ್ರೀ ಅವರಿಗೆ ನಿರ್ಮಾಪಕ ಕೆ.ಮಂಜು ಹಾಗೂ ಇಮ್ರಾನ್ ಸರ್ದಾರಿಯಾ ಅವಮಾನ ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದ್ದೇವೆ ಎಂದು ನಿರ್ಮಾಪಕ ಹಾಗೂ ಮಾಲಾಶ್ರೀ ಪತಿ ರಾಮು ಹೇಳಿದ್ದಾರೆ.
ಚಿತ್ರರಂಗದಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡಿರುವ ಮಾಲಾಶ್ರೀಯವರಿಗೆ ನಟನೆ ಬರಲ್ಲ ಎನ್ನುವ ಮೂಲಕ ಇಮ್ರಾನ್ ಸರ್ದಾರಿಯಾ ಹಾಗೂ ಕೆ.ಮಂಜು ಅವಮಾನ ಮಾಡಿದ್ದಾರೆ. ಈ ಪಾತ್ರಕ್ಕೆ ನೀವೇ ಬೇಕು ಎಂದು ಹೇಳಿ ಆ ನಂತರ ನಟನೆ ಬರಲ್ಲ ಎನ್ನುವ ಜೊತೆಗೆ ಸಿನಿಮಾ ನಿಲ್ಲಿಸುತ್ತಿದ್ದೇವೆ ಎಂದರೆ ಏನು ಅರ್ಥ? ಎಂದು ಪ್ರಶ್ನಿಸಿದ್ದಾರೆ.
ಕೆ.ಮಂಜು 2012ರಲ್ಲಿ ಬಂದು ಮಲಯಾಳಂ ನಿರ್ದೇಶಕ ಶಾಜಿ ಕೈಲಾಸ್ ಸಿನಿಮಾ ಮಾಡುತ್ತಾರೆಂದು ಹೇಳಿ ಬಂದು ಅಡ್ವಾನ್ಸ್ ಕೊಟ್ಟಿದ್ದರು. ಆದರೆ ಆ ನಂತರ ಸುದ್ದಿ ಇರಲಿಲ್ಲ. ಕೆಲ ವರ್ಷಗಳ ನಂತರ ಶಾಜಿ ಬಿಝಿ ಇದ್ದಾರೆ ಎನ್ನುತ್ತಾ ಬೇರೆ ನಿರ್ದೇಶಕರನ್ನು ಕರೆತಂದರು. ಅದರಲ್ಲಿ ಇಮ್ರಾನ್ ಕೂಡಾ ಒಬ್ಬರು. ಮಾಲಾಶ್ರೀ ಸಿನಿಮಾ ಮಾಡಲು ಒಪ್ಪಿದ್ದರು. ಆದರೆ ನಿರ್ಮಾಪಕರು ಬದಲಾಗಿರುವ ವಿಷಯ ನಮಗೆ ಗೊತ್ತೆ ಇರಲಿಲ್ಲ. ಜಾಹೀರಾತು ನೋಡಿ ಗೊತ್ತಾಗಿ ಕೇಳಿದಾಗ, ನನಗೆ ಆದಾಯ ತೆರಿಗೆ ಸಮಸ್ಯೆಯಾಗುತ್ತದೆ. ಆ ಕಾರಣಕ್ಕಾಗಿ ಬೇರೆ ನಿರ್ಮಾಪಕರ ಹೆಸರಲ್ಲಿ ಮಾಡುತ್ತೇನೆ ಎಂದರು. ದುಡ್ಡಿನ ವ್ಯವಹಾರ ಏನಿದ್ದರೂ ಸರಿಪಡಿಸಬಹುದು. ಆದರೆ ಮಂಜು ಈ ರೀತಿ ಮಾತನಾಡಿ ಅವಮಾನ ಮಾಡಿದ್ದನ್ನು ಸರಿಪಡಿಸಲು ಸಾಧ್ಯವಿಲ್ಲ’ ಎಂದು ರಾಮು ಹೇಳಿದರು.