
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸರಿ ಸಮಾರು ಐದು ದಶಕಗಳ ಕಾಲ ಚಿತ್ರರಂಗದ ಅನಭಿಶಕ್ತ ದೊರೆಯಾಗಿ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಚಿರನೂತನವಾಗಿರುವ ಚಿತ್ರರಂಗದ ಧ್ರುವತಾರೆ, ವರನಟ ದಿವಂಗತ ಡಾ.ರಾಜ್‌ಕುಮಾರ್ ಅವರಿಗೆ ಇಂದು 88ನೇ ಹುಟ್ಟು ಹಬ್ಬದ ಸಂಭ್ರಮ.
ವರನಟ ರಾಜ್‌ಕುಮಾರ್ ಅಭಿಮಾನಿಗಳನ್ನಗಲಿ 10 ವರ್ಷ ಕಳೆದಿದೆ ಆದರೂ ರಾಜ್‌ಕುಮಾರ್,ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಶಾಶತ್ವತವಾಗಿ ಇದ್ದಾರೆ. ಹೀಗಾಗಿ ಅವರ 88 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮ ಸಡಗರದಿಂದ ಆಚರಿಸಿದರು.
ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ರಾಜ್‌ಕುಮಾರ್ ಸ್ಮಾರಕದಲ್ಲಿ ರಾತ್ರಿಯಿಂದಲೇ ರಾಜ್ಯದ ವಿವಿದೆಡೆಯಿಂದ ಆಗಮಿಸಿದ ಅಭಿಮಾನಿಗಳು ರಾಜ್‌ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬದಲ್ಲಿ ಪಾಲ್ಗೊಂಡರು.
ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್, ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗು ಪುನೀತ್ ರಾಜ್ ಕುಮಾರ್ ಸೇರಿದಂತೆ ರಾಜ್‌ಕುಮಾರ್ ಕುಟುಂಬದ ಸದಸ್ಯರು ಸಮಾಧಿಗೆ ಪೂಜೆ ಸಲ್ಲಿಸಿದರು. ಚಿತ್ರರಂಗದ ಅನೇಕ ನಿರ್ಮಾಪಕರು, ನಟರು ,ಕಲಾವಿದರು ತಂತ್ರಜ್ಞರು ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದರು.
ಸ್ಥಳೀಯ ಶಾಸಕ ಗೋಪಾಲಯ್ಯ, ಕಂಠೀರವ ಸ್ಟುಡಿಯೋ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್ ಸೇರಿದಂತೆ ಅನೇಕ ಗಣ್ಯರು ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ರಾಜ್‌ಕುಮಾರ್ ಜಯಂತಿಯಲ್ಲಿ ಪಾಲ್ಗೊಂಡರು.
ವಿವಿದೆಡೆಯಿಂದ ಆಗಮಿಸಿದ್ದ ಅಭಿಮಾನಿಗಳು, ರಾಜ್‌ಕುಮಾರ್ ಮತ್ತೊಮ್ಮೆ ಹುಟ್ಟಿ ಬರಲಿ ಎನ್ನುವ ಘೋಷಣೆ ಕೂಗುತ್ತಿದ್ದು ಸಾಮಾನ್ಯವಾಗಿತ್ತು,
ಅಭಿಮಾನಿಗಳು ರಕ್ತದಾನ,ಅನ್ನದಾನ, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು.ಅಣ್ಣಾವ್ರ ಹುಟ್ಟುಹಬ್ಬದ ಅಂಗವಾಗಿ “ಭಲೇ ಹುಚ್ಚ”ಸಿನಿಮಾ ಮೂಹೂರ್ತ ನಡೆಸುವ ಮೂಲಕ ಚಿತ್ರತಂಡ ರಾಜಣ್ಣ ಅವರಿಗೆ ವಿಶೇಷವಾಗಿ ನಮನ ಸಲ್ಲಿಸಿದರು.
ಈ ಬಾರಿ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಎರಡು ದಿನಗಳ ಮುನ್ನವೇ “ಬಬ್ರುವಾಹನ” ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಹುಟ್ಟುಹಬ್ಬದ ಕೊಡುಗೆ ನೀಡಲಾಗಿದೆ.
ಸರ್ಕಾರದ ವತಿಯಿಂದ ಸಂಜೆ ೬ ಗಂಟೆಗೆ ರಾಜ್‌ಕುಮಾರ್ ಅವರ ೮೮ ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರವೀಂದ್ರ ಕಲಾ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ.