ಬೆಂಗಳೂರು: ‘ಎದೆಗಾರಿಕೆ’ಯ ಯಶಸ್ಸಿನ ನಂತರ ಭೂಗತ ಲೋಕದ ಸಿನೆಮಾಗಳ ಬಗ್ಗೆಯೇ ಹೆಚ್ಚೆಚ್ಚು ಒಲವು ತೋರುತ್ತಿರುವ ನಟ ಆದಿತ್ಯ, ಈಗ ಪಿ ಎಸ್ ಸತ್ಯ ನಿರ್ದೇಶನದ ‘ಬೆಂಗಳೂರು ಅಂಡರ್ ವರ್ಲ್ಡ್’ ಸಿನೆಮಾದಲ್ಲಿ ನಟಿಸಲಿದ್ದಾರೆ. ಈ ಸಿನೆಮಾಗೆ ಇಂದು ಚಿತ್ರೀಕರಣ ಪ್ರಾರಂಭವಾಗಲಿದ್ದು, ತಮಿಳು ನಟ ಡೇನಿಯಲ್ ಬಲರಾಜ್, ಅವಿನಾಶ್, ಶೋಭರಾಜ್ ಮತ್ತು ಉದಯ್ ತಾರಾಗಣದ ಭಾಗವಾಗಿದ್ದಾರೆ.
ಮಾತಿಗೆ ಸಿಕ್ಕ ಆದಿತ್ಯ “ಬೆಂಗಳೂರು ಭೂಗತಲೋಕದ ಪ್ರಚಾರ ರಾಯಭಾರಿಯಾಗುವ ಉದ್ದೇಶವೇನಿಲ್ಲ. ನಾನು ಈ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದೇಕೆಂದರೆ ಪ್ರೇಕ್ಷಕರು ನನ್ನನ್ನು ಆ ಪಾತ್ರಗಳನ್ನು ನೋಡಲು ಇಷ್ಟ ಪಡುತ್ತಾರೆ. ‘ಎದೆಗಾರಿಕೆ’ ನಂತರವಂತೂ ನನ್ನನ್ನು ಹಾಗೆಯೇ ಗುರುತಿಸಲಾಗುತ್ತದೆ” ಎನ್ನುತ್ತಾರೆ ಆದಿತ್ಯ.
“ನಾನು ಮೊದಲ ಬಾರಿಗೆ ಸತ್ಯ ಅವರ ಸಿನೆಮಾದಲ್ಲಿ ನಟಿಸುತ್ತಿದ್ದೇನೆ. ಹಿಟ್ ಜೋಡಿಯಾಗುವ ಭರವಸೆಯಿದೆ” ಎನ್ನುತ್ತಾರೆ. “ಇದು ವಿಶೇಷವಾದ ಭೂಗತ ಕಥೆಯಾಗಿದ್ದು ಇಡಿ ಸಿನೆಮಾ ಬೆಂಗಳೂರಿನಲ್ಲೆ ನಡೆಯುತ್ತದೆ” ಎನ್ನುತ್ತಾರೆ.
ತಮ್ಮ ಲವರ್ ಬಾಯ್ ಇಮೇಜ್ ಅನ್ನು ತೊರೆಯಲು ಸಿದ್ಧರಾಗಿರುವ ಆದಿತ್ಯಾ “ಜನ ನನ್ನನ್ನು ಆ ಪಾತ್ರಗಳಲ್ಲಿ ನೋಡಲು ಇಷ್ಟ ಪಡದಿದ್ದರೆ ನಟಿಸುವುದಿಲ್ಲ” ಎನ್ನುತ್ತಾರೆ.
ಸತ್ಯ ಅವರ ಕೊನೆಯ ಸಿನೆಮಾ ‘ಶಿವಾಜಿನಗರ’. ಈಗ ಎರಡು ವರ್ಷಗಳ ನಂತರ ಮತ್ತೆ ಸಿನೆಮಾ ಮಾಡುತ್ತಿದ್ದು “ಸಿನೆಮಾ ಬಗ್ಗೆ ಒಂದು ಸಾಲು ಕೂಡ ಈಗ ಹೇಳುವುದಿಲ್ಲ ಆದರೆ ಇದು ಇಡೀ ಬೆಂಗಳೂರಿನ ಭೂಗತ ಲೋಕದ ಕಥೆ ಇದೆ” ಎನ್ನುತ್ತಾರೆ. ಕೊನೆಗೆ ಸಂದೇಶವನ್ನು ಕೂಡ ನೀಡಲಿದೆಯಂತೆ ಸಿನೆಮಾ.
ಶಿವಾಜಿನಗರ, ಗೋರಿಪಾಳ್ಯ ಮತ್ತು ಕಲಾಸಿಪಾಳ್ಯದಲ್ಲಿ ಸುಮಾರು ೪೫ ದಿನಗಳವೆರೆಗೆ ನಿರಂತರವಾಗಿ ಚಿತ್ರೀಕರಣ ನಡೆಯಲಿದೆಯಂತೆ. ನಾಯಕ ನಟಿಯ ಆಯ್ಕೆ ಇನ್ನೂ ನಡೆಯಬೇಕಿದ್ದು, ‘ಚಿಂಗಾರಿ’ ಖ್ಯಾತಿಯ ಭಾವನಾ ಅವರನ್ನು ಆಯ್ಕೆ ಮಾಡಿದ್ದು ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರಂತೆ. ಜಿ ಆನಂದ್ ನಿರ್ಮಿಸುತ್ತಿರುವ ಈ ಸಿನೆಮಾಗೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದು, ಆರ್ಯವರ್ಧನ್ ಸಿನೆಮ್ಯಾಟೋಗ್ರಾಫರ್.