ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ತಲೆಮರೆಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಶಿವಕುಮಾರ್ ಅಲಿಯಾಸ್ ಶಿವಕುಮಾರಯ್ಯ ಕೊನೆಗೂ ಸಿಐಡಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣದಲ್ಲಿ ತಲೆ ನೋವಾಗಿ ಪರಿಣಮಿಸಿದ್ದ ಕಿಂಗ್‌ಪಿನ್ ಶಿವಕುಮಾರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಸಿಐಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ೧೨ ಮಂದಿ ಆರೋಪಿಗಳನ್ನು ಬಂಧಿಸಿರುವ ಸಿಐಡಿಯ ೪೦ ಅಧಿಕಾರಿಗಳನ್ನೊಳಗೊಂಡ ತಂಡ ಸತತ ೧ ತಿಂಗಳ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಶಿವಕುಮಾರ್(೬೭)ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂದಿನಿ ಲೇಔಟ್‌ನ ಮನೆಗೆ ಬೀಗ ಜಡಿದು ಕಳೆದ ಮಾ.೩೧ರಿಂದ ತಲೆ ಮರೆಸಿಕೊಂಡಿದ್ದ ಶಿವಕುಮಾರ್‌ನನ್ನು ಮಡಿವಾಳದ ಗಾರೆಬಾವಿಪಾಳ್ಯದ ಬಳಿ ನಿನ್ನೆ ರಾತ್ರಿ ಬಂಧಿಸಿ ವಿಚಾರಣೆಗೊಳಪಡಿಸಲಾಗಿದ್ದು ಆತನ ಮೇಲೆ ಸಂಘಟಿತ ಅಪರಾಧ (ಕೋಕಾ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಐಡಿಯ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಕಿಶೋರ್‌ಚಂದ್ರ ಅವರು ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಬಯಲಾಗುತ್ತಿದ್ದಂತೆ ಕೇರಳ ಇನ್ನಿತರ ಕಡೆಗಳಿಗೆ ಪರಾರಿಯಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಶಿವಕುಮಾರ್ ಕೊನೆಗೆ ನಗರಕ್ಕೆ ಬಂದಿರುವುದನ್ನು ಪತ್ತೆಹಚ್ಚಲಾಯಿತು ಗಾರೆಬಾವಿಪಾಳ್ಯದ ಬಳಿ ಆತ ತಲೆಮರೆಸಿಕೊಂಡಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಿ ೫೦ ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆಎಂದರು.
ಪಿಯುಸಿ ಪರೀಕ್ಷೆಯಲ್ಲದೇ ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುತ್ತಿದ್ದ ಕೆಪಿಎಸ್‌ಸಿ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಸೋರಿಕೆಯಲ್ಲಿ ಶಿವಕುಮಾರ್‌ನ ಕೈವಾಡವಿರುವ ಬಗ್ಗೆ ವಿಚಾರಣೆ ನಡೆಸಲಾಗಿದೆ.
ನಂದಿನಿಲೇಔಟ್‌ನ ಮನೆಯ ಬಳಿಯೇ ತರಬೇತಿ ನೀಡುತ್ತಿದ್ದ ನಿವೃತ್ತ ಉಪನ್ಯಾಸಕ ಶಿವಕುಮಾರ್ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳ ಪರಿಚಯ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯ ವೇಳೆ ಗೊತ್ತಿರುವ ಅಧಿಕಾರಿಗಳಖಿಗೆ ಹಣದ ಅಮಿಷವೊಡ್ಡಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಲಕ್ಷಾಂತರ ಹಣ ಗಳಿಸಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಆರೋಪಿ ಶಿವಕುಮಾರಸ್ವಾಮಿ, ನಂದಿನಿ ಲೇಔಟ್ ನಲ್ಲಿ ವಾಸಿಸುತ್ತಿದ್ದು ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿ ಮಗನೊಂದಿಗೆ ಟ್ಯುಟೋರಿಯಲ್ ನಡೆಸುತ್ತಾ ಪಿಯುಸಿ,ಎಸ್ ಎಸ್ ಎಲ್ ಸಿ,ಇಂಜಿನಿಯರಿಂಗ್ ಎಂಬಿಬಿಎಸ್‌ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುತ್ತಿದ್ದನು.
ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯನ್ನು ಕಳೆದ ೧೦ ವರ್ಷಗಳಿಂದ ನಡೆಸುತ್ತಿದ್ದ ಆರೋಪಿಯು ದಂಧೆಗೆ ಸಹಕಾರಿಯಾಗಲು ಅಯಾ ಮಂಡಳಿಯ ಉನ್ನತ ಅಧಿಕಾರಿಗಳು ಹಾಗೂ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಎನ್ನುವ ಆರೋಪವಿದೆ
ವಿಚಾರಣೆ ವೇಳೆ ಮೊಬೈಲ್ ಕಾಲ್ ಲಿಸ್ಟ್ ಗಳನ್ನು ಪರಿಶೀಲಿಸಿದಾಗ ನಂಟು ಹೊಂದಿದ್ದು ಬಹಿರಂಗಗೊಂಡಿದೆ.ಈತ ಹಲವು ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ ನಲ್ಲಿ ನೇರವಾಗಿ ಭಾಗಿಯಾಗಿದ್ದು,ಈತನ ಜೊತೆಗೆ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿರುವ ಈತನ ಮಗ ದಿನೇಶ್ ಸಹ ಈ ದಂಧೆಯಲ್ಲಿ ಭಾಗಿಯಾಗಿದ್ದಾನೆ.ಇದಲ್ಲದೆ ಆರೋಪಿ ಶಿವಕುಮಾರ್ ರಾಜ್ಯದಲ್ಲಿ ೮ ಟ್ಯುಟೋರಿಯಲ್ ಗಳನ್ನು ನಡೆಸುತ್ತಿದ್ದಾನೆ ಎಂಬ ಮಾಹಿತಿ ಹೊರ ಬಂದಿದೆ.
ಈತನ ವಿರುದ್ದ ೨೦೧೩ ತುಮಕೂರಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಕುರಿತು ಹೊಸ ಬಡಾವಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಈ ಸಂಬಂಧ ಆರೋಪಪಟ್ಟಿ ಸಿದ್ದಪಡಿಸಲಾಗಿದೆ.ಈ ದಂಧೆಯಲ್ಲಿ ಈತ ಹಲವು ಭಾರಿ ಜೈಲಿಗೆ ಹೋಗಿ ಹೊರ ಬಂದಿದ್ದ ಮತ್ತೊಬ್ಬ ಆರೋಪಿ ದೈಹಿಕ ಶಿಕ್ಷಕ ಮಂಜುನಾಥ್‌ಗೆ ಈತನೇ ಪ್ರಶ್ನೆ ಪತ್ರಿಕೆ ನೀಡಿರುವ ಮಾಹಿತಿಯನ್ನು ತನಿಖಾಧಿಕಾರಿಗಳು ಕಲೆಹಾಕಿದ್ದಾರೆ.