ಬೀದರ್: ಅಪಾಯಕಾರಿ ಹಕ್ಕಿ ಜ್ವರ ರಾಜ್ಯದ ಮೇಲೆ ಮತ್ತೆ ತನ್ನ ಕೆಂಗಣ್ಣು ಬೀರಿದ್ದು, ನಿನ್ನೆಯಷ್ಟೇ ಬೀದರ್ ನ ಕೋಳಿ ಫಾರಂ ಒಂದರಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಸೋಂಕು ಪೀಡಿತ ಸುಮಾರು 1.5 ಲಕ್ಷ ಹಕ್ಕಿಗಳನ್ನು ವೈಜ್ಞಾನಿಕ ಪ್ರಕ್ರಿಯೆ ಮೂಲಕ ಕೊಲ್ಲಲು ನಿರ್ಧರಿಸಲಾಗಿದೆ.
ಇನ್ನು ಬೀದರ್ ನಲ್ಲಿ ಹಕ್ಕಿ ಜ್ವರ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ನಿನ್ನೆ ಸಂಜೆಯಷ್ಟೇ ರಾಜ್ಯ ಪಶುಸಂಗೋಪನಾ ಸಚಿವ ಎ.ಮಂಜು ಅವರು, ತುರ್ತು ಉನ್ನತ ಮಟ್ಟದ ಸಭೆ ನಡೆಸಿ, ರಾಜ್ಯದಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರದ ಸೋಂಕು ಇತರೆಡೆಗೆ ಹರಡದಂತೆ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು. ಅದರಂತೆ ವೈದ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ನೀಡಿರುವ ಮಾಹಿತಿ ಮೇರೆಗೆ ಕೋಳಿಗಳು ಸೇರಿದಂತೆ ಸುಮಾರು 1.5 ಲಕ್ಷ ರೋಗ ಪೀಡಿತ ಹಕ್ಕಿಗಳನ್ನು ನಾಶಪಡಿಸಲು ಸೂಚನೆ ನೀಡಿದ್ದಾರೆ.
ರೋಗ ಇತರ ಭಾಗಗಳಿಗೆ ಹರಡುವುದನ್ನು ತಡೆಯಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸ್ಥಳೀಯ ಜಿಲ್ಲಾಡಳಿತಕ್ಕೆ ಮತ್ತು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು. ಇದೀಗ ಸೋಂಕು ಕಾಣಿಸಿಕೊಂಡಿರುವ ಸುತ್ತಮುತ್ತಲಿನ ಪ್ರದೇಶದ ಕೋಳಿಗಳನ್ನು ವೈಜ್ಞಾನಿಕ ವಿಧಾನದಲ್ಲಿ ನಾಶ ಪಡಿಸಲು ವೈದ್ಯಾಧಿಕಾರಿಗಳು ಮುಂದಾಗಿದ್ದಾರೆ.
ಮೂಲಗಳ ಪ್ರಕಾರ ಬೀದರ್ ನ ಹುಮ್ನಾಬಾದ್ ನಲ್ಲಿರುವ ಮೆಳಕೇರಾ ಗ್ರಾಮದಲ್ಲಿನ ರಮೇಶ್ ಗುಪ್ತಾ ಅವರ ಕೋಳಿ ಫಾರಂನಲ್ಲಿ ಹಕ್ಕಿ ಜ್ವರದಿಂದಾಗಿ 20 ದಿನಗಳಲ್ಲಿ 35 ಸಾವಿರ ಕೋಳಿಗಳು ಸಾವಿಗೀಡಾಗಿವೆ. ಹೀಗಾಗಿ ಈ ಫಾರಂನಲ್ಲಿರುವ 1.5 ಲಕ್ಷ ಕೋಳಿಗಳನ್ನು ಹಾಗೂ ಆಸುಪಾಸಿನ 1 ಕಿ. ಮೀ ವ್ಯಾಪ್ತಿಯ ಫಾರಂಗಳಲ್ಲಿರುವ ಕೋಳಿಗಳನ್ನು ನಾಶಪಡಿಸುವಂತೆ ಪಶುಸಂಗೋಪನಾ ಇಲಾಖೆ ಸೂಚಿಸಿದೆ. ರಮೇಶ್ ಗುಪ್ತಾ ಅವರ ಕೋಳಿ ಫಾರಂನಲ್ಲಿನ ಸುಮಾರು 23 ಸಾವಿರ ಕೋಳಿಗಳು ಸೋಂಕಿನಿಂದ ನರಳುತ್ತಿವೆ. ಹೀಗಾಗಿ ಸೋಂಕು ಇತರೆ ಕೋಳಿಗಳಿಗೂ ಹರಡಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ಕೋಳಿ ಫಾರಂ ಸುತ್ತಮುತ್ತಲಿನ ಸುಮಾರು 1.ಕಿ. ವ್ಯಾಪ್ತಿಯಲ್ಲಿರುವ ಎಲ್ಲ ಕೋಳಿಗಳನ್ನು ನಾಶಪಡಿಸುವಂತೆ ಸೂಚನೆ ನೀಡಲಾಗಿದೆ.
ಮಾಲೀಕರಿಗೆ ಪರಿಹಾರ
ಇದೇ ವೇಳೆ ಮೆಳಕೇರಾ ಫಾರಂ ಸುತ್ತಲಿನ 1.ಕಿ.ಮೀ ವ್ಯಾಪ್ತಿಯಲ್ಲಿ ಕೋಳಿಗಳನ್ನು ನಾಶಪಡಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಕೋಳಿಗಳ ಮಾಲೀಕರಿಗೆ ಪರಿಹಾರ ನೀಡಲಾಗುತ್ತದೆ ಎಂದು ಪಶಸಂಗೋಪನಾ ಅಧಿಕಾರಿಗಳು ತಿಳಿಸಿದ್ದಾರೆ.