ಬೆಂಗಳೂರು: ತಮಿಳಿನ ಖ್ಯಾತ ನಿರ್ದೇಶಕ ಸಮುದ್ರಕಣಿ ಅವರೇ ಬರೆದು ನಿರ್ದೇಶಿಸಿದ್ದ ತಮಿಳಿನ ‘ಅಪ್ಪ’ ಸಿನೆಮಾದ ಕನ್ನಡ, ತೆಲುಗು ಮತ್ತು ಹಿಂದಿ ಅವತರಿಣಿಕೆಗಳ ಮೇಲೆ ಈಗ ಕೆಲಸ ಮಾಡುತ್ತಿದ್ದಾರೆ.
ಕನ್ನಡದಲ್ಲಿ ‘ತಂದೆ’, ತೆಲುಗಿನಲ್ಲಿ ‘ನಾನಾ’ ಮತ್ತು ಹಿಂದಿಯಲ್ಲಿ ‘ಪಾಪ’ ಎಂದು ಶೀರ್ಷಿಕೆಯುಳ್ಳ ಸಿನೆಮಾದಲ್ಲಿ ಶಿವರಾಜ್ ಕುಮಾರ್, ವೆಂಕಟೇಶ್ ಮತ್ತು ಅನಿಲ್ ಕಪೂರ್ ಅವರುಗಳನ್ನು ಪ್ರಧಾನ ನಟರಾಗಿ ಆಯ್ಕೆ ಮಾಡಲು ಎದುರುನೋಡುತ್ತಿದ್ದಾರೆ.
“ಇದು ಜಾಗತಿಕ ವಿಷಯ, ತಂದೆ-ಮಗನ ಸಂಬಂಧದ ಜೊತೆಗೆ ನಮ್ಮ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಚರ್ಚಿಸುತ್ತದೆ. ಇದು ಹೇಳಲೇಬೇಕಾದ ಕಥೆ” ಎನ್ನುತ್ತಾರೆ ನಿರ್ದೇಶಕ.
ದೊಡ್ಡ ಕನಸುಗಳನ್ನು ಹೊಂದಿರುವ ಸಮುದ್ರಕಣಿ “ಅವಕಾಶ ಸಿಕ್ಕರೆ ಇದನ್ನು ೧೫ ಭಾಷೆಗಳಲ್ಲಿ ಮಾಡಲು ನನಗಾಸೆ ಆದರೆ ಸದ್ಯಕ್ಕೆ ಮೂರು ಭಾಷೆಗಳಲ್ಲಿ ಮಾಡಲಿದ್ದೇನೆ” ಎನ್ನುತ್ತಾರೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ.
‘ಸಾತ್ತೈ’ ಸಿನೆಮಾದ ಮುಂದಿನ ಭಾಗ ಎನ್ನಲಾಗಿರುವ ‘ಅಪ್ಪ’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು ಮೂರೂ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ.
ಕನ್ನಡಕ್ಕೆ ಶಿವರಾಜ್ ಕುಮಾರ್ ನನ್ನ ಮೊದಲ ಆಯ್ಕೆ ಎನ್ನುವ ನಿರ್ದೇಶಕ “ನನಗೆ ಬೇರೆ ಯಾರನ್ನೂ ಈ ಪಾತ್ರಕ್ಕೆ ಯೋಚಿಸಲು ಸಾಧ್ಯವಾಗುತ್ತಿಲ್ಲ. ನಾನಾಗಲೇ ಈ ಯೋಜನೆಯನ್ನು ಅವರ ಜೊತೆಗೆ ಚರ್ಚಿಸಿದ್ದೇನೆ ಅವರು ಆಸಕ್ತಿ ತೋರಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇನ್ನೊಂದೆರಡು ವಾರದಲ್ಲಿ ‘ಅಪ್ಪ’ ಸಿನೆಮಾ ತೋರಿಸಲಿದ್ದೇನೆ “ಅದರ ಬಗ್ಗೆ ನನಗೆ ಅನಿಸಿಕೆಗಳು ಬೇಕು. ಅವರು ದಿನಾಂಕ ನೀಡಿದ ನಂತರ ಕನ್ನಡ ಚಿತ್ರೀಕರಣ ಪ್ರಾರಂಭಿಸಲಿದ್ದೇನೆ” ಎನ್ನುತ್ತಾರೆ ಅವರು.
ಶಿವರಾಜ್ ಕುಮಾರ್ ಜೊತೆಗೆ ಕೆಲಸ ಮಾಡಲು ಕಾತರದಿಂದ ಕಾಯುತ್ತಿರುವ ಸಮುದ್ರಕಣಿ “ಇದು ಒಳ್ಳೆಯ ವಿಷಯ. ಈ ಸಿನೆಮಾ ಆದಮೇಲೆ ಕರ್ನಾಟಕದ ಮಕ್ಕಳೆಲ್ಲಾ ಅವರನ್ನು ಅಪ್ಪ ಎನ್ನಲಿದ್ದಾರೆ” ಎಂಬ ಆತ್ಮವಿಶ್ವಾಸವನ್ನು ತೋರುತ್ತಾರೆ.
ಇಳಯರಾಜ ಸಂಗೀತ ನೀಡಿರುವ ತಮಿಳು ಸಿನೆಮಾ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಎಲ್ಲವೂ ಯೋಜನೆಯಂತೆ ನಡೆದರೆ ‘ತಂದೆ’ ಸಮುದ್ರಕಣಿ ಅವರ ಕನ್ನಡದ ಎರಡನೇ ಸಿನೆಮಾ ಆಗಲಿದೆ. ಇದಕ್ಕೂ ಮುಂಚೆ ಅವರು ಪುನೀತ್ ರಾಜಕುಮಾರ್ ಅವರ ‘ಯಾರೇ ಕೂಗಾಡಲಿ’ ಸಿನೆಮಾ ನಿರ್ದೇಶಿಸಿದ್ದರು.