ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕಬಾಲಿ ಇದೇ ಜುಲೈ1ರಂದು ತೆರೆಗೆ ಅಪ್ಪಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಕಬಾಲಿ ಚಿತ್ರ ಜೂನ್ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಲಾಗಿತ್ತಾದರೂ ಕಾರಣಾಂತರಗಳಿಂದ ಚಿತ್ರ ಮುಂದಕ್ಕೆ ಹೋಗಿತ್ತು. ಬಳಿಕ ಜುಲೈ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವುದಾಗಿ ಹೇಳಿದ್ದ ಚಿತ್ರತಂಡ ಇದೀಗ ದಿನಾಂಕ ನಿಗದಿ ಮಾಡಿದ್ದು, ಇದೇ ಜುಲೈ 1ರಂದು ಕಬಾಲಿ ಚಿತ್ರ ತೆರೆಕಾಣಲಿದೆ ಎಂದು ತಿಳಿದುಬಂದಿದೆ. ಇನ್ನು ಕಬಾಲಿ ಚಿತ್ರ ಜೈಲೈ6ರಂದು ತೆರೆಕಾಣುವ ಕುರಿತು ಸುದ್ದಿಗಳು ಹರಿದಾಡಿತ್ತಾದರೂ, ಜುಲೈ 7ರಂದು ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಚಿತ್ರ ತೆರೆಕಾಣುತ್ತಿದೆ.
ಹೀಗಾಗಿ ಪೈಪೋಟಿ ಎದುರಾಗುವ ನಿಟ್ಟಿನಲ್ಲಿ ಕಬಾಲಿ ಚಿತ್ರವನ್ನು 6 ದಿನಗಳ ಮುಂಚಿತವಾಗಿಯೇ ಅಂದರೆ ಜುಲೈ 1ರಂದೇ ತೆರೆಗೆ ತರಲು ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬಡತನದ ಬೇಗುದಿಯಲ್ಲಿ ಬೇಯುವ ವ್ಯಕ್ತಿ ಸಮಾಜದಲ್ಲಿನ ಸಮಸ್ಯೆಗಳಿಂದಾಗಿ ಹೇಗೆ ಓರ್ವ ಗ್ಯಾಂಗ್ ಸ್ಟರ್ ಆಗಿ ರೂಪುಗೊಳ್ಳುತ್ತಾನೆ ಎಂಬ ಕಥಾಹಂದರವುಳ್ಳ ಕಬಾಲಿ ಚಿತ್ರವನ್ನು ಪಿಎ ರಂಜಿತ್ ಕುಮಾರ್ ಅವರು ನಿರ್ದೇಶಿಸಿದ್ದು, ಚಿತ್ರದ ಟ್ರೈಲರ್ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಮಾಡಿದೆ.
ಯೂಟ್ಯೂಬ್ ನಲ್ಲಿ ಕಬಾಲಿ ಚಿತ್ರದ ಟ್ರೈಲರ್ ನಲ್ಲಿ ಕೋಟ್ಯಂತರ ಮಂದಿ ವೀಕ್ಷಿಸಿದ್ದು, ಯೂಟ್ಯೂಬ್ ನಲ್ಲಿ ಮಿಂಚಿದ್ದ ಕಬಾಲಿ ಇದೀಗ ಬೆಳ್ಳಿ ಪರದೆ ಮಿಂಚಲು ತಯಾರಾಗಿದ್ದಾನೆ. ಪ್ರಸ್ತುತ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ತೈವಾನ್ ನಟ ವಿನ್ಸ್ ಟನ್ ಚಾವೋ ಬುಧವಾರ ಚಿತ್ರತಂಡವನ್ನು ಸೇರಿಕೊಂಡಿದ್ದು, ತಮ್ಮ ಪಾತ್ರದ ಡಬ್ಬಿಂಗ್ ಕಾರ್ಯವನ್ನು ಪೂರ್ಣಗೊಳಿಸುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಕಲೈ ಅರಸನ್, ಧನ್ಸಿಕಾ, ರಿತ್ವಿಕಾ ಅವರು ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕಲೈಪುಲಿ ಎಸ್ ತನು ಅವರು ಬಂಡವಾಳ ಹೂಡಿದ್ದಾರೆ.