ಬೆಂಗಳೂರು/ಬಳ್ಳಾರಿ: ಸಾಹಸಸಿಂಹ, ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಮೈಸೂರಿಗೆ ಸ್ಥಳಾಂತರಿಸಬಾರದು. ಬೆಂಗಳೂರಿನ ಅಭಿಮಾನ್ ಸ್ಟೂಡಿಯೋದಲ್ಲಿನ ಸ್ಥಳದಲ್ಲಿಯೇ ಸ್ಮಾರಕವನ್ನು ಅತಿ ಶೀಘ್ರವೇ ನಿರ್ಮಿಸಬೇಕು ಎಂದು ಅಖಿಲ ಕರ್ನಾಟಕ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘ, ವಿಷ್ಣು ಸೇನಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಅಭಿಮಾನಿಗಳು, ಮೈಸೂರಿಗೆ ಸ್ಥಳಾಂತರ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಹಾಗೊಂದು ವೇಳೆ ಸರ್ಕಾರ ಮುಂದಾದರೆ ಅದರ ವಿರುದ್ಧ ರಾಜ್ಯಾಧ್ಯಂತ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ವಿಷ್ಣುವರ್ಧನ್ ಇಹಲೋಕ ತ್ಯಜಿಸಿ 6 ವರ್ಷಗಳು ಕಳೆದಿದ್ದರೂ ಸರ್ಕಾರ ಇನ್ನೂ ಸ್ಮಾರಕ ನಿರ್ಮಾಣ ಮಾಡುವಲ್ಲಿ ವಿಳಂಬ ಧೋರಣೆ ತಾಳುತ್ತಿದೆ. ಇದು ಸರಿಯಾದ ಕ್ರಮವಲ್ಲ, ಈಗಿರುವಾಗಲೇ ವಿಷ್ಣುವರ್ಧನ್ ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋದಿಂದ ಮೈಸೂರಿಗೆ ಸ್ಥಳಾಂತರಿಸುವ ವಿಷಯ ನೋವಿನ ಸಂಗತಿ. ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದ ಅಭಿಮಾನಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಅಂಬರೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಸೇರಿದಂತೆ ಸರ್ಕಾರವು ವಿಷ್ಣುವರ್ಧನ್‌ರವರ ಸ್ಮಾರಕದ ನಿರ್ಮಾಣ ಮಾಡಲಿರುವ ಕಾನೂನಿನ ತೊಡಕುಗಳನ್ನು ನಿವಾರಿಸಬೇಕು ಎಂದು ಜಿಲ್ಲಾ ಅಭಿಮಾನಿಗಳ ಸಂಘದ ಅಧ್ಯಕ್ಷ ಕುಂದಾಪುರ ನಾಗರಾಜ್ ಆಗ್ರಹಿಸಿದರು.
ರಾಜ್ಯ ಸರ್ಕಾರವು ಒಂದು ವೇಳೆ ಡಾ. ವಿಷ್ಣುವರ್ಧನ್ ರ ಸ್ಮಾರಕವನ್ನು ಸ್ಥಳಾಂತರಿಸಲು ಮುಂದಾದಲ್ಲಿ ವಿಷ್ಣು ಅಭಿಮಾನಿಗಳೊಂದಿಗೆ, ಕನ್ನಡಾಭಿಮಾನಿಗಳೆಲ್ಲರೂ ಸೇರಿ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಿಷ್ಣು ಸೇನಾ ಸಮಿತಿಯ ನಗರಾಧ್ಯಕ್ಷ ಕೊಳಗಲ್ಲು ಶಿವರಾಂ, ಕನ್ನಡ ಕ್ರಾಂತಿ ದಳದ ಜಿಲ್ಲಾ ಅಧ್ಯಕ್ಷ ದರೂರು ಶಾಂತನಗೌಡ, ಎಐವೈಎಫ್ ಜಿಲ್ಲಾ ಧುರೀಣ ಸಂಗನಕಲ್ಲು ಕಟ್ಟೆಬಸಪ್ಪ, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ದೇಸಾಯಿ ಷಡಾಕ್ಷರಪ್ಪ, ಕನ್ನಡ ಪರ ಹಿರಿಯ ಧುರೀಣ ಆನೆ ಗಂಗಣ್ಣ ಮತ್ತಿತರರು ಇದ್ದರು.