ನವದೆಹಲಿ: ಕೇಂದ್ರ ಸಚಿವ ಸಂಪುಟದಲ್ಲಿ ಅನಿಲ್ ದೇಸಾಯಿಗೆ ಕ್ಯಾಬಿನೆಟ್ ದರ್ಜೆ ಸಿಗದಿರುವುದಕ್ಕೆ ಅಸಮಾಧಾನಗೊಂಡಿರುವ ಶಿವಸೇನೆ ಪ್ರಮಾಣ ಸ್ವೀಕಾರ ಕಾರ್ಯಕ್ರಮವನ್ನು ಬಹಿಷ್ಕರಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಸೇನೆ, ಸುರೇಶ್ ಪ್ರಭುವಿನ ಆಯ್ಕೆ ಪಕ್ಷದ ಆಯ್ಕೆಯಾಗಿರಲಿಲ್ಲ, ಪಕ್ಷ ಅನಿಲ್ ದೇಸಾಯಿ ಅವರನ್ನು ಸೂಚಿಸಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಖಾತೆ ಹಂಚಿಕೆಯಲ್ಲಿ ನಿರೀಕ್ಷೆಯಿತ್ತು. ಆದರೆ ಅನಿಲ್ ದೇಸಾಯಿಯವರಿಗೆ ರಾಜ್ಯ ಸಚಿವ ಸ್ಥಾನ ನೀಡಿರುವುದು ಪಕ್ಷಕ್ಕೆ ಅಸಮಾಧಾನ ಉಂಟಾಗುವಂತೆ ಮಾಡಿದೆ.
ಅಂತಿಮ ಕ್ಷಣದಲ್ಲಿ ತನ್ನ ನಿರ್ಧಾರ ಬದಲಿಸಿದ್ದ ಶಿವಸೇನೆ ಸಮಾರಂಭದ ಕೊನೆಯ ಕ್ಷಣದಲ್ಲಿ ಪಕ್ಷದ ಯಾರೊಬ್ಬ ಮುಖಂಡನೂ ಪಾಲ್ಗೊಳ್ಳದಂತೆ ನಿರ್ಧಾರ ತೆಗೆದುಕೊಂಡಿತ್ತು. ಅಲ್ಲದೇ ಅನಿಲ್ ದೇಸಾಯಿ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ತಿಳಿಸಿತ್ತು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಅನಿಲ್ ದೇಸಾಯಿ ಅವರಿಗೆ ಕ್ಯಾಬಿನೆಟ್ ದರ್ಜೆ ನೀಡುವಂತೆ ಆಗ್ರಹ ಮಾಡುತ್ತಿರುವ ಶಿವಸೇನೆ, ಇಂದು ಸಂಜೆ 4 ಗಂಟೆಗೆ ಪಕ್ಷದ ಸಭೆ ಕರೆದಿದೆ. ಸಭೆಯಲ್ಲಿ ಈಗಾಗಲೇ ಮಹಾರಾಷ್ಟ್ರದಲ್ಲಿ ಅಲ್ಪಮತ ತೆಗೆದುಕೊಂಡು ಸ್ಥಾನ ಪಡೆದುಕೊಂಡಿರುವ ಬಿಜೆಪಿಯ ವಿರೋಧ ಪಕ್ಷವಾಗುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.