ಮುಂಬಯಿ: ತುಳುನಾಡಿನ ಸಾಂಪ್ರದಾಯಿಕ ಜಾನಪದ ಕ್ರೀಡೆ ಕಂಬಳದ ನಿಷೇಧದಿಂದ ತುಳುವರಿಗೆ ಅತ್ಯಂತ ಬೇಸರವಾಗಿದೆ. ಕಂಬಳವು ಮೊದಲಿನಂತೆ ನಿರಂತರವಾಗಿ ನಡೆಯಬೇಕು ಎಂಬ ಹಂಬಲದಿಂದ ಕಂಬಳದ ಯಜಮಾನರೆಲ್ಲಾ ಒಟ್ಟು ಸೇರಿ ಮುಂಬಯಿ ತುಳುವರ ಜೊತೆಗೆ ಸಮಾಲೋಚಿಸಲು ಮುಂಬಯಿಗೆ ಬಂದಿದ್ದಾರೆ. ನಾವೆಲ್ಲರೂ ಒಂದಾಗಿ ಸರಕಾರದ ಈ ಕ್ರಮವನ್ನು ವಿರೋಧಿಸಬೇಕು. ಅದಕ್ಕಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಕುರ್ಲಾ ಪೂರ್ವದ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದ ಶ್ರೀಮತಿ ಪ್ರಮೋದಾ ಶಿವರಾಮ ಶೆಟ್ಟಿ ವೇದಿಕೆಯಲ್ಲಿ ಊರಿನ ಕಂಬಳ ಸಮಿತಿ ಹಾಗೂ ಸ್ಥಳೀಯ ಕಂಬಳ ಅಭಿಮಾನಿಗಳ ಜಂಟಿ ಆಶ್ರಯದಲ್ಲಿ ನಡೆದ ಕಂಬಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಂಬಳವು ತುಳುನಾಡಿನ ಯಕ್ಷಗಾನಕ್ಕೆ ಸಮಾನವಾದ ಕಲೆಯಾಗಿದೆ. ತುಳುನಾಡಿನವರಾದ ನಾವು ದೈವವನ್ನು ಆರಾಧಿಸುವ ಹಾಗೆಯೇ ಇಂತಹ ಕಲೆಯನ್ನು ಅತ್ಯಂತ ಶ್ರದ್ಧೆ, ಭಕ್ತಿ, ಗೌರವದಿಂದ ಕಾಣುತ್ತಾ ಬಂದಿದ್ದೇವೆ.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಎರ್ಮಾಳ್ ರೋಹಿತ್ ಶೆಟ್ಟಿ ಅವರು ಮಾತನಾಡಿ, ದೈವದ ಕಂಬಳವೆಂದೇ ಪ್ರಖ್ಯಾತಿ ಪಡೆದಿರುವ ತುಳುನಾಡ ಜಾನಪದ ಕಲೆಯಾದ ಈ ಕ್ರೀಡೆ ಸುಮಾರು ಒಂದು ಸಾವಿರ ವರ್ಷಗಳ ಹಿಂದೆಯೇ ಇತ್ತೆಂಬುವುದರ ದಾಖಲೆ ತುಳುನಾಡಿನ ಶಿಲಾಶಾಸನದಲ್ಲಿದೆ. ಕಳೆದ ಸುಮಾರು 50 ವರ್ಷಗಳಿಂದ ಜೋಡುಕರೆ ಕಂಬಳವಾಗಿ ಪ್ರಸಿದ್ಧಿಗೆ ಬಂದಿರುವ ಈ ಕ್ರೀಡೆಯನ್ನು ಉಳಿಸುವಲ್ಲಿ ಮುಂಬಯಿ ತುಳು-ಕನ್ನಡಿಗರ ಕೊಡುಗೆ ಅಪಾರವಾಗಿದೆ. ಕಂಬಳದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಉಡುಪಿ ಜಿಲ್ಲಾ ಕೋರ್ಟ್‌ನಲ್ಲಿರುವ ಆರ್ಡರ್‌ನ್ನು ತಡೆಯಲು ಹೈಕೋರ್ಟ್‌ಗೆ ಅಪೀಲು ಸಲ್ಲಿಸಿದ್ದೇವೆ. ಸುಪ್ರೀಂ ಕೋರ್ಟ್‌ನ ಆರ್ಡರ್‌ನಲ್ಲಿ ಕಂಬಳ ನಿಲ್ಲಿಸಬೇಕು ಎಂಬ ಯಾವುದೇ ದಾಖಲೆ ಕಾಣುತ್ತಿಲ್ಲ. ಈ ಕಾರಣದಿಂದ ಹೋರಾಟಕ್ಕಿಳಿಯಲು ಕಂಬಳ ಸಮಿತಿ ನಿರ್ಧರಿಸಿದೆ. ಮುಂಬಯಿಯಲ್ಲಿ ಸಮಾಲೋಚನಾ ಸಭೆಯನ್ನು ನಡೆಸಲು ಅನುವು ಮಾಡಿಕೊಟ್ಟ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.
ಇನ್ನೋರ್ವ ಅತಿಥಿ ಕೊಳಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ, ಕಲಾಜಗತ್ತು ವಿಜಯಕುಮಾರ್ ಶೆಟ್ಟಿ, ಪ್ರವೀಣ್ ಬಿ. ಶೆಟ್ಟಿ, ಉದಯ ಶೆಟ್ಟಿ ಕಾಂತಾವರ, ಶೇಖರ್ ಶೆಟ್ಟಿ, ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಜಯ ಎ. ಶೆಟ್ಟಿ ಮೊದಲಾದವರು ಮಾತನಾಡಿ ಸರಕಾರದ ಈ ಕ್ರಮವನ್ನು ವಿರೋಧಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ, ಜೊತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಜೊತೆ ಕೋಶಾಧಿಕಾರಿ ಮಹೇಶ್ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಗೌರವ ಪ್ರಧಾನ ಕಾರ್ಯದರ್ಶಿ ಉಳ್ತೂರು ಮೋಹನ್‌ದಾಸ್ ಶೆಟ್ಟಿ ಅವರು ವಂದಿಸಿದರು. ಅಶೋಕ್ ಪಕ್ಕಳ ಅವರು ಕಾರ್ಯಕ್ರಮ ನಿರೂಪಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್