ಮುಂಬಯಿ: ನನ್ನ ಆಪ್ತ ಸ್ನೇಹಿತನ ತಾಯಿಯೇ ನನ್ನ ಮೇಲೆ ರೇಪ್ ಮಾಡಿ, ಅದನ್ನು ಆಕೆ ವಿಡಿಯೋದಲ್ಲಿ ಚಿತ್ರೀಕರಿಸಿಕೊಂಡು, ತಾನು ಹೇಳಿದ ಹಾಗೆ ಕೇಳದಿದ್ದರೆ ಆಕೆಯ ಮೇಲೆ ನಾನು ರೇಪ್ ಮಾಡಿದ್ದೇನೆ ಎಂದು ಪೊಲೀಸರಿಗೆ ದೂರು ನೀಡಿ ಜೈಲಿಗೆ ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾಳೆ’ ಎಂದು ಹತ್ತನೇ ಕ್ಲಾಸಿನಲ್ಲಿ ಓದುತ್ತಿರುವ 16 ವರ್ಷ ಪ್ರಾಯದ ಹುಡುಗನೋರ್ವ ಇಲ್ಲಿನ ಆರ್‌ಸಿಎಫ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಮಹಿಳೆಯೇ ಹುಡುಗನ ಮೇಲೆ ಎಸಗಿರುವುದಾಗಿ ಹೇಳಲಾಗಿರುವ ಅತ್ಯಾಚಾರ, ಬ್ಲಾಕ್ ಮೇಲ್‌ನ ಈ ಸೂಕ್ಷ್ಮ ಪ್ರಕರಣವನ್ನು ಆರ್‌ಸಿಎಫ್ ಪೊಲೀಸರು ಎಚ್ಚರಿಕೆಯಿಂದ ತನಿಖೆ ನಡೆಸುತ್ತಿದ್ದಾರೆ.
ಮೂರು ತಿಂಗಳ ಹಿಂದೆ ಚೆಂಬೂರ್‌ನಲ್ಲಿರುವ ನನ್ನ ಅತ್ಯುತ್ತಮ ಸ್ನೇಹಿತನನ್ನು ಕಾಣಲೆಂದು ನಾನು ಆತನ ಮನೆಗೆ ಹೋಗಿದ್ದೆ. ಆ ಹೊತ್ತಿನಲ್ಲಿ ಆತ ಮನೆಯಲ್ಲಿ ಇರಲಿಲ್ಲ. ಆತನ ತಾಯಿ ಇದ್ದಳು. ನಿನ್ನ ಫ್ರೆಂಡ್ ಈಗ ಮನೆಯಲ್ಲಿ ಇಲ್ಲ. ಆದರೂ ನೀನು ಒಳಗೆ ಬಂದು ಕುಳಿತುಕೋ, ಆತನಿಗಾಗಿ ಸ್ವಲ್ಪ ಹೊತ್ತು ಕಾದು ನೋಡು’ ಎಂದಳು. ಅಂತೆಯೇ ನಾನು ಮನೆಯೊಳಗೆ ಹೋಗಿ ಕುಳಿತೆ. ಆಗ ಸ್ನೇಹಿತನ ತಾಯಿ ನನಗೆ ಕುಡಿಯಲು ತಂಪು ಪಾನೀಯ ಕೊಟ್ಟಳು. ಅದನ್ನು ಕುಡಿಯುತ್ತಲೇ ನನಗೆ ಮಂಪರು ಆವರಿಸಿದಂತಾಯಿತು. ಬಹುಷಃ ಆಕೆ ಆ ಪಾನೀಯದಲ್ಲಿ ಯಾವುದೋ ರಾಸಾಯನಿಕ ಬೆರೆಸಿ ಕೊಟ್ಟಿದ್ದಿರಬೇಕು ಅಂತ ಅನ್ನಿಸಿತು.
ನಾನು ನಿದ್ದೆಗಣ್ಣಿನಲ್ಲಿರುವಂತೆಯೇ ಆಕೆ ನನ್ನ ಸನಿಹಕ್ಕೆ ಬಂದು ನನ್ನ ಬಟ್ಟೆಯನ್ನು ಕಳಚಿ ನನ್ನನ್ನು ವಿವಸ್ತ್ರಗೊಳಿಸಿದಳು. ಬಳಿಕ ಆಕೆ ನನ್ನ ಮೇಲೆ ಬಿದ್ದಳು. ತಾನೆಸಗಿದ ಈ ಕೃತ್ಯಗಳನ್ನು ಆಕೆ ವಿಡಿಯೋದಲ್ಲಿ ಚಿತ್ರೀಕರಿಸಿಕೊಂಡಿದ್ದಿರಬೇಕು. ಈಗ ಆಕೆ ನನಗೆ ಆ ವಿಡಿಯೋ ತೋರಿಸಿ, ಆಕೆ ಹೇಳಿದ ಹಾಗೆ ನಾನು ಕೇಳಬೇಕೆಂದೂ, ಇಲ್ಲದಿದ್ದರೆ ನಾನೇ ಆಕೆಯ ಮೇಲೆ ರೇಪ್ ಮಾಡಿರುವುದಾಗಿ ಪೊಲೀಸರಿಗೆ ದೂರು ಕೊಡುವುದಾಗಿಯೂ ಬೆದರಿಸುತ್ತಿದ್ದಾಳೆ. ಅದಾಗಿ ನಾನು ಕಡ್ಡಾಯವಾಗಿ ಆಗೀಗ ಆಕೆಯ ಮನೆಗೆ ಭೇಟಿ ಕೊಡುವಂತೆ ಮಾಡಿದ್ದಾಳೆ. ಜತೆಗೆ ನನ್ನೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾಳೆ’.
ಈ ನಡುವೆ, ತರಗತಿಯಲ್ಲಿ ಚೆನ್ನಾಗಿ ಓದಿಕೊಂಡು ಮನೆಯಲ್ಲಿ ಲವಲವಿಕೆಯಿಂದ ಇರುತ್ತಿದ್ದ ಹುಡುಗನಲ್ಲಿ ವಿಚಿತ್ರವಾದ ಭೀತಿಯಿಂದ ಒಡಗೂಡಿದ ಬದಲಾವಣೆಯನ್ನು ಮನೆಯಲ್ಲಿ ಹೆತ್ತವರು ಕಾಣುತ್ತಲೇ ಅಚ್ಚರಿಪಟ್ಟರು. ನಿಧಾನವಾಗಿ ಹುಡುಗನ ತಂದೆಯು ಮಗನಲ್ಲಿ ವಿಷಯವೇನೆಂದು ಕೇಳಿದಾಗ ಆತ ಕಳೆದ 3 ತಿಂಗಳಿಂದ ತನ್ನ ಮೇಲೆ ನಡೆಯುತ್ತಿರುವ ಬ್ಲಾಕ್ ಮೇಲ್, ಅತ್ಯಾಚಾರವನ್ನು ವಿವರವಾಗಿ ಹೇಳಿದ. ಒಡನೆಯೇ ಆತನ ತಂದೆ, ಹುಡುಗನೊಂದಿಗೆ ಆರ್‌ಸಿಎಫ್ ಠಾಣೆಗೆ ಹೋಗಿ ರೇಪ್ ಹಾಗೂ ಬ್ಲಾಕ್ ಮೇಲ್ ದೂರನ್ನು ದಾಖಲಿಸಿದರು.
“ನನ್ನ ಮಗ ಮುಗ್ಧ, ಒಳ್ಳೆಯ ಹುಡುಗ. ಕಲಿಯುವುದರಲ್ಲಿ ಕೂಡ ಮುಂದು. ಆದರೆ ಅಛಾನಕ್ ಆಗಿ ಆತನ ನಡವಳಿಕೆಯಲ್ಲಿ ಕಂಡು ಬಂದ ಬದಲಾವಣೆಯಿಂದ ನಾವು ಕಂಗಾಲಾದೆವು. ಹಿಂದೆ ಚುರುಕು ಮತ್ತು ಉತ್ಸಾಹದಿಂದ ಇರುತ್ತಿದ್ದ ಹುಡುಗ ಈಗ ಎರಡು ಮೂರು ತಿಂಗಳಿಂದ ಡಲ್ ಆಗಲು ಕಾರಣವೇನು ಎಂಬುದು ನಮ್ಮ ಮಟ್ಟಿಗೆ ದೊಡ್ಡ ಪ್ರಶ್ನೆಯೇ ಆಯಿತು’ ಎಂದು ವೃತ್ತಿಯಲ್ಲಿ ಟೇಲರ್ ಆಗಿರುವ ಹುಡುಗನ ತಂದೆ ಹೇಳಿದ್ದಾರೆ.
“ನಾವು ಈ ಸೂಕ್ಷ್ಮವಾದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಕೇಳಲು ವಿಚಿತ್ರವಾಗಿರುವ ಈ ಘಟನೆಯ ಪೂರ್ಣ ನಿಜಾಂಶಗಳು ಗೊತ್ತಾದ ಬಳಿಕವೇ ಎಫ್ ಐ ಆರ್ ದಾಖಲು ಮಾಡಿಕೊಳ್ಳುತ್ತೇವೆ’ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ದಿಲೀಪ್ ರಾವುತ್ ಹೇಳಿದ್ದಾರೆ.