ಮನೋರಂಜನೆ

ಸಲ್ಲು ದೋಷಿ: ಬಾಲಿವುಡ್‌ಗೆ 200 ಕೋಟಿ ಲಾಸ್; ಬಾಲಿವುಡ್‍ಗೆ ತಲೆಬಿಸಿ!

Pinterest LinkedIn Tumblr

bajrangi

ಮುಂಬಯಿ: ಗುದ್ದೋಡು ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ದೋಷಿ ಎಂದು ಸೆಷನ್ ಕೋರ್ಟ್ ಬುಧವಾರ ತೀರ್ಪು ನೀಡಿದ್ದು, 6 ವರ್ಷಗಳ ಜೈಲು ಶಿಕ್ಷೆವಿಧಿಸಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಚಿತ್ರಗಳ ಮೇಲೆ 200ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ಹೂಡಿದ ನಿರ್ಮಾಪಕರ ಎದೆಯಲ್ಲಿ ನಡುಕ ಆರಂಭಗೊಂಡಿದೆ.

ಇನ್ನೊಂದೆಡೆ, ಸಲ್ಮಾನ್‌ಗೆ ಶಿಕ್ಷೆ ಕುರಿತು ಬೆಟ್ಟಿಂಗ್ ಜೋರಾಗಿತ್ತು. ಕೆಲವು ಮೂಲಗಳ ಪ್ರಕಾರ, 2000 ಕೋಟಿಗೂ ಹೆಚ್ಚು ಹಣ ಬೆಟ್ಟಿಂಗ್‌ನಲ್ಲಿ ಹೂಡಿಕೆಯಾಗಿದೆ.

ಸಲ್ಮಾನ್ ಇದ್ದ ಕಾರು ಪುಟ್‌ಪಾತ್ ಮೇಲೆ ಮಲಗಿದ್ದವರ ಮೇಲೆ ಹರಿದಿತ್ತು. ಈ ದುರ್ಘಟನೆಯಲ್ಲಿ ಒಬ್ಬ ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಅಪಘಾತ ನಡೆದ ವೇಳೆ ತಾನು ಕಾರು ಚಲಾಯಿಸುತ್ತಿರಲಿಲ್ಲ. ತಮ್ಮ ಚಾಲಕ ವಾಹನ ನಡೆಸುತ್ತಿದ್ದ ಎಂದು ಸಲ್ಮಾನ್ ಹೇಳುತ್ತಿದ್ದಾರೆ. ಚಾಲಕ ಸಹ ತಪ್ಪು ಒಪ್ಪಿಕೊಂಡಿದ್ದಾನೆ. ಆದರೆ, ಕೆಲವು ಪ್ರತ್ಯಕ್ಷ ಸಾಕ್ಷಿಗಳು ನಟನಿಗೆ ಪ್ರತಿಕೂಲವಾಗಿವೆ. ಅಪಘಾತ ನಡೆದ ದಿನ ಸಲ್ಮಾನ್ ಮದ್ಯಪಾನ ಮಾಡಿ, ವಾಹನ ನಡೆಸುತ್ತಿದ್ದರು. ಅಷ್ಟೇ ಅಲ್ಲದೇ, ಚಾಲನ ಮಾತುಮೀರಿ ಮಿತಿಮೀರಿದ ವೇಗದಲ್ಲಿ ವಾಹನ ಓಡಿಸುತ್ತಿದ್ದರು ಎಂದು ಅವರು ಹೇಳಿರುವುದು ಸಲ್ಮಾನ್‌ಗೆ ಮುಳುವಾಗಿದೆ.

ಬಿಡುಗಡೆಗೆ ಕಾದಿವೆ ಸಾಲು ಸಾಲು ಚಿತ್ರಗಳು..

49 ವರ್ಷಗಳ ಯಂಗ್ ಆ್ಯಂಡ್ ಎನರ್ಜಿಟಿಕ್ ಹೀರೊ ಸಲ್ಲು ಅವರ ಸಾಲು ಸಾಲು ಚಿತ್ರಗಳೇ ಈ ವರ್ಷ ಬಿಡುಗಡೆಗೆ ಕಾದಿವೆ. ಸದ್ಯ ಅವು ಚಿತ್ರೀಕರಣ ಹಂತದಲ್ಲಿವೆ. ಕರೀನಾ ಕಪೂರ್ ಜೋಡಿಯಾಗಿ ಸಲ್ಲು ನಟಿಸುತ್ತಿರುವ ಬಜರಂಗಿ ಭಾಯಿಜಾನ್ ಚಿತ್ರವು ಸದ್ಯ ಕಾಶ್ಮೀರದಲ್ಲಿ ಶೂಟಿಂಗ್ ಆಗುತ್ತಿದೆ.ಶೇ.80 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು ಇನ್ನು ಚಿತ್ರೀಕರಣ ಪೂರ್ಣಗೊಲ್ಲಬೇಕಿದೆ.

ಸೋನಂ ಕಪೂರ್ ಅವರೊಂದಿಗೆ ನಟಿಸುತ್ತಿರುವ ಪ್ರೇಮ್ ರತನ್ ಧನ್ ಪಾಯೊ ಚಿತ್ರವು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಚಿತ್ರೀಕರಣವಾಗುತ್ತಿದೆ. 2012ರ ಸೂಪರ್‌ಹಿಟ್ ಚಿತ್ರ ಏಕ್ತಾ ಟೈಗರ್ ನಿರ್ದೇಶಿಸಿದ ಕಬೀರ್ ಖಾನ್ ಅವರು ಬಜರಂಗಿ ಭಾಯಿಜಾನ್ ಚಿತ್ರ ನಿರ್ದೇಶಿಸುತ್ತಿರುವುದು ವಿಶೇಷವಾದರೆ. ಮೈನೆ ಪ್ಯಾರ್‌ಕಿಯಾದಂತಹ ಆಲ್ ಟೈಮ್ ಫೇವರಿಟ್ ಚಿತ್ರ ನಿರ್ದೇಶಿಸಿದ ಸೂರಜ್ ಬರ್ಜತ್ಯ ಅವರು ಪ್ರೇಮ್ ರತನ್ ಧ್ಯಾನ್ ಪಾಯೊ ಚಿತ್ರ ಡೈರೆಕ್ಟ್ ಮಾಡುತ್ತಿರುವುದು ಮತ್ತೊಂದು ವಿಶೇಷ.

ಈ ಎರಡೂ ಚಿತ್ರಗಳು 100 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಿದೆ. ಅಂದರೆ ಎರಡೂ ಚಿತ್ರಗಳು ಅರ್ಧದಲ್ಲೇ ನಿಂತರೆ ಬಾಲಿವುಡ್‌ಗೆ ಕನಿಷ್ಠ 200 ಕೋಟಿ ನಷ್ಟ ಎಂದು ಬಾಲಿವುಡ್ ಪರಿಣತರು ಹೇಳುತ್ತಿದ್ದಾರೆ.

Write A Comment