ಮುಂಬೈ, ಜು.31- ಇದು ಭಾರತದಲ್ಲಿ ನಡೆದಿರುವ ಕಾನೂನಿನ ಕಗ್ಗೊಲೆ..! 1993ರ ಸರಣಿ ಬಾಂಬ್ಸ್ಫೋಟದ ರೂವಾರಿ ಹಾಗೂ ನಿನ್ನೆಯಷ್ಟೆ ಗಲ್ಲಿಗೇರಿದ ಮೊದಲ ಅಪರಾಧಿ ಯಾಕೂಬ್ ಮೆಮೋನ್ಗೆ ನ್ಯಾಯಾಲಯ ವಿಧಿಸಿರುವ ಶಿಕ್ಷೆಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರ ಛೋಟಾ ಶಕೀಲ್ ಪ್ರತಿಕ್ರಿಯಿಸಿದ ಬಗೆ ಇದು. ಮುಂಬೈ ಸರಣಿ ಬಾಂಬ್ಸ್ಫೋಟದ ಪ್ರಮುಖ ರೂವಾರಿಗಳಾದ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಅನೀಸ್ ಇಬ್ರಾಹಿಂ ಮತ್ತು ಟೈಗರ್ ಮೆನನ್ ಸದ್ಯಕ್ಕೆ ಪಾಕಿಸ್ತಾನದಲ್ಲಿ ಐಎಸ್ಐ ಆಶ್ರಯ ಪಡೆದು ನೆಲೆಯೂರಿದ್ದಾರೆ.
ನಿನ್ನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಯಾಕೂಬ್ ಮೆಮೋನ್ನನ್ನು ಗಲ್ಲಿಗೆ ಹಾಕಲಾಯಿತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಇದು ಕಾನೂನಿನ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ ವಚನಭ್ರಷ್ಟ ರಾಷ್ಟ್ರವಾಗಿದೆ. ಯಾಕೂಬ್ ಮೆಮೋನ್ ನೇಪಾಳದಲ್ಲಿ ಸೆರೆ ಸಿಕ್ಕನೆಂದು ಅಲ್ಲಿನ ತನಿಖಾಧಿಕಾರಿಗಳು ಸುಳ್ಳು ಹೇಳಿದ್ದಾರೆ. ವಾಸ್ತವವಾಗಿ ಯಾಕೂಬ್ ತಾನೇ ಸ್ವಯಂಪ್ರೇರಿತವಾಗಿ ತಾಯ್ನಾಡಿಗೆ ಹಿಂದಿರುಗಿದ್ದ. ವಿಚಾರಣೆಗೆ ಸಹಕರಿಸಿದರೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ ಎಂದು ಮೊದಲು ಅಧಿಕಾರಿಗಳು ಹೇಳಿದ್ದರು. ಈಗ ಆತನನ್ನೇ ನೇಣಿಗೆ ಹಾಕಲಾಗಿದೆ. ಭಾರತ ಇದರಿಂದ ವಚನಭ್ರಷ್ಟ ರಾಷ್ಟ್ರವಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ.
ಡಿ ಕಂಪೆನಿ ಮುಖ್ಯಸ್ಥರಾಗಿರುವ ದಾವೂದ್ ಮತ್ತು ಛೋಟಾ ಶಕೀಲ್ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಅವರು ಮುಂದೊಂದು ದಿನ ನಾವು ಭಾರತಕ್ಕೆ ಬಂದರೆ ನಮಗೂ ನೇಣು ಹಾಕುವುದಿಲ್ಲ ಎಂಬುದಕ್ಕೆ ಖಾತ್ರಿಯಾದರೂ ಏನು ಎಂದು ಪ್ರಶ್ನಿಸಿದ್ದಾರೆ. ಒಬ್ಬ ಅಮಾಯಕನನ್ನು ಗಲ್ಲಿಗೆ ಹಾಕಲಾಗಿದೆ. ವಿಶ್ವಕ್ಕೆ ಭಾರತ ಸರ್ಕಾರ ಯಾವ ಸಂದೇಶ ನೀಡಬೇಕೆಂದು ಬಯಸಿದೆ. ಇದು ಕಾನೂನನ್ನೇ ಹತ್ಯೆ ಮಾಡಿದಂತಾಗಿದೆ. ಮಹಾರಾಷ್ಟ್ರ ಸರ್ಕಾರ ಈ ರೀತಿ ನಡೆದುಕೊಂಡಿದ್ದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದ್ದಾರೆ.
ಮುಂಬೈ ಸರಣಿ ಸ್ಫೋಟಕ್ಕೆ ಟೈಗರ್ ಮೆನನ್ ಪ್ರಮುಖ ರೂವಾರಿಯಾಗಿದ್ದಾನೆ. ಆತನನ್ನು ಹಿಡಿಯಲು ಸಾಧ್ಯವಾಗದ ಭಾರತ ಅಮಾಯಕರನ್ನು ಹಿಡಿದು ಗಲ್ಲಿಗೆ ಹಾಕಲಾಗುತ್ತಿದೆ. ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಛೋಟಾ ಶಕೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಭಾರತ ಸರ್ಕಾರದ ಬಗ್ಗೆ ಭವಿಷ್ಯದಲ್ಲಿ ಯಾರೊಬ್ಬರೂ ನಂಬಿಕೆ ಇಡುವುದಿಲ್ಲ. ಮುಂದೊಂದು ದಿನ ನಮಗೂ ಇದೇ ರೀತಿ ಆಗಬಹುದು. ದೋಷಾರೋಪ ಪಟ್ಟಿಯಲ್ಲಿ ಯಾಕೂಬ್ ಮೆಮೋನ್ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿದೆ. ಅಲ್ಲದೆ, ಆತನ ಅಂತ್ಯಕ್ರಿಯೆ ನಡೆಯುವ ವೇಳೆ ಚಿತ್ರೀಕರಣಕ್ಕೂ ಅವಕಾಶ ನೀಡಲಿಲ್ಲ ಎಂದು ಕಿಡಿಕಾರಿದ್ದಾನೆ.