ಮುಂಬೈ

1993 ಮುಂಬೈ ಸ್ಫೋಟ: ಜನರ ರಕ್ಷಕ ‘ಜಂಜೀರ್’ ನಾಯಿಯನ್ನು ಮರೆಯುವುದುಂಟೆ?

Pinterest LinkedIn Tumblr

zanjeer_dogಮುಂಬೈ: 1993 ಮುಂಬೈ ಬಾಂಬ್ ಸರಣಿ ಸ್ಫೋಟ ಪ್ರಕರಣದ ದೋಷಿ ಯಾಕೂಬ್ ಮೆಮನ್  ನ್ನು ಗಲ್ಲಿಗೇರಿಸಿದ್ದಾಯ್ತು. 22 ವರ್ಷಗಳ ನಂತರ ಮುಂಬೈ  ಸರಣಿ ಬಾಂಬ್ ಸ್ಫೋಟದ ಬಗೆಗಿನ ವಿವರಗಳನ್ನು ಮತ್ತೊಮ್ಮೆ ಹೆಕ್ಕಿ ತೆಗೆಯುವಾಗ ಜಂಜೀರ್ ಎಂಬ ನಾಯಿಯ ಸಾಹಸ ಕತೆಯೊಂದು ನಮಗೆ ಸಿಗುತ್ತದೆ. ಲಾಬ್ರಡೋರ್ ರಿಟ್ರೀವರ್ ತಳಿಯ ನಾಯಿ ಜಂಜೀರ್.

ಜಂಜೀರ್ ಸಾಹಸಗಾಥೆಯ ಬಗ್ಗೆ ಹೇಳಬೇಕಾದರೆ 22 ವರ್ಷಗಳ ಹಿಂದಿನ ಕಥೆಯನ್ನಿಲ್ಲಿ ಉಲ್ಲೇಖಿಸಲೇಬೇಕು. 1992 ಡಿಸೆಂಬರ್ ನಲ್ಲಿ ಮುಂಬೈ ಪೊಲೀಸ್ ಬಾಂಬ್ ಡೆಟೆಕ್ಷನ್ ಆ್ಯಂಡ್ ಡಿಸ್ಪೋಸಲ್ ತಂಡದಲ್ಲಿ ಜಂಜೀರ್ ಸೇರ್ಪಡೆಯಾಗಿತ್ತು. ಪುಣೆಯ ಅಪರಾಧ ತನಿಖಾದಳದಲ್ಲಿ ತರಬೇತಿ ಪಡೆದಿದ್ದ ಜಂಜೀರ್ ತನ್ನ ಚಾಣಾಕ್ಷತೆ ಹಾಗೂ ಚುರುಕುತನದಿಂದ ಮುಂಬೈ ಪೊಲೀಸರ ಮನ ಗೆದ್ದಿತ್ತು.

1993ರಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟದ ತನಿಖೆಯಲ್ಲಿ ಜಂಜೀರ್ ನಿರ್ಣಾಯಕ ಪಾತ್ರವಹಿಸಿತ್ತು. ಸ್ಫೋಟಕಗಳನ್ನು ಬಚ್ಚಿಟ್ಟ ಸ್ಥಳಗಳನ್ನೆಲ್ಲಾ ಮೂಸಿ ಪತ್ತೆ ಹಚ್ಚಿ ಪೊಲೀಸರಿಗೆ ಸಹಾಯ ಮಾಡುವ ಮೂಲಕ ಹಲವಾರು ಜನರ ಜೀವ ಕಾಪಾಡಿತ್ತು. ಜಂಜೀರ್ನ ಸಮಯಪ್ರಜ್ಞೆಯಿಂದಾಗಿ ಮುಂಬೈಯಲ್ಲಿ ನಡೆಯಬೇಕಾಗಿದ್ದ ಮೂರು ಬಾಂಬ್ ಸ್ಫೋಟ ಯೋಜನೆಗಳು ವಿಫಲವಾಗಿದ್ದವು.

ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಾತ್ರವಲ್ಲ 11 ಮಿಲಿಟರಿ ಬಾಂಬ್, 175 ಪೆಟ್ರೋಲ್ ಬಾಂಬ್ ಹಾಗೂ 600 ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಿದ ಕೀರ್ತಿಯೂ  ಜಂಜೀರ್ನದ್ದು.

ಚುರುಕು ಬುದ್ಧಿ ಮಾತ್ರವಲ್ಲ ದೇಹ ಭಂಗಿಯಿಂದಲೂ ಜಂಜೀರ್ ಪೊಲೀಸರ ಮನ ಗೆದ್ದಿತ್ತು, . ಜಂಜೀರ್ನ ಮೈ ಬಣ್ಣವೂ ಆಕರ್ಷಕವಾಗಿದ್ದು, ಎಲ್ಲರೂ ಅದನ್ನು ಜಿಂಜರ್ ಡಾಗ್ ಎಂದೇ ಮುದ್ದಾಗಿ ಕರೆಯುತ್ತಿದ್ದರು.

2000 ಇಸ್ವಿಯಲ್ಲಿ ಶ್ವಾಸಕೋಶದ ಸಮಸ್ಯೆಯಿಂದಾಗಿ ಜಂಜೀರ್ ಸಾವನ್ನಪ್ಪಿತು. ಉನ್ನತ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಎಲ್ಲ ರೀತಿಯ ಗೌರವಗಳಿಂದ ಪೊಲೀಸ್ ಇಲಾಖೆ ಜಂಜೀರ್ಗೆ ವಿದಾಯ ಹೇಳಿತು.

Retriever ಎಂದರೆ ಪತ್ತೆ ಹಚ್ಚುವುದು ಎಂದು ಅರ್ಥ. ಜಂಜೀರ್ ತನ್ನ ಜೀವನವಿಡೀ ಬಾಂಬ್ಗಳನ್ನು ಪತ್ತೆ ಹಚ್ಚಿ ಹಲವಾರು ಜನರ ರಕ್ಷಣೆಯನ್ನು ಮಾಡಿದೆ. ಮುಂಬೈ ಸರಣಿ ಸ್ಫೋಟದ ತನಿಖೆಯಲ್ಲಿ ಮಹತ್ತರ ಪಾತ್ರವಹಿಸಿದ ಈ ಮೂಕ ಪ್ರಾಣಿಯ ಸಹಾಯಕ್ಕೆ ನಮ್ಮೆಲ್ಲರ ಧನ್ಯವಾದ ಸಲ್ಲುತ್ತದೆ.

Write A Comment