ಮುಂಬೈ: ವಿವಾದಿಂದಲೇ ಸದಾ ಸುದ್ದಿಯಲ್ಲಿರುವ ಸ್ವಯಂಘೋಷಿತ ದೇವ ಮಹಿಳೆ ರಾಧೇ ಮಾ ಅವರ ಮಿನಿ ಸ್ಕರ್ಟ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ರಾಧೇ ಮಾ ಭಕ್ತರು ಮುಜುಗರ ಪಡುವಂತಹ ಸಂದರ್ಭ ಎದುರಾಗಿದೆ.
ರಾಧೆ ಮಾ ಕೆಂಪು ಬಣ್ಣದ ಮಿನಿಸ್ಕರ್ಟ್ ಹಾಕಿರವ ಫೋಟೋವನ್ನು ನಟ ರಾಹುಲ್ ಮಹಾಜನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದು, ಫೋಟೋದಲ್ಲಿರುವ ಈ ವ್ಯಕ್ತಿ ಯಾರೆಂದು ಗುರ್ತಿಸಿ ಎಂದು ಕೇಳಿದ್ದಾರೆ. ರಾಹುಲ್ ಮಹಾಜನ್ ಹಾಕಿರುವ ರಾಧೆ ಮಾ ಅವರ ಚಿತ್ರವೀಗ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದ್ದು, ರಾಧೆ ಮಾ ಅವರ ಭಕ್ತರು ಬೆಚ್ಚಿಬೀಳುವಂತೆ ಮಾಡಿದೆ. ಅಲ್ಲದೆ, ಫೋಟೋ ಕುರಿತಂತೆ ರಾಧೆ ಮಾ ವಿರುದ್ಧ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ.
ಈ ಆರೋಪಗಳನ್ನು ತಳ್ಳಿಹಾಕಿರುವ ರಾಧೆ ಮಾ, ನನ್ನ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳೆಲ್ಲವೂ ಸುಳ್ಳು, ಆರೋಪಗಳಿಗೆ ಸತ್ಯತೆಗಳಿಲ್ಲ. ಇವೆಲ್ಲ ಕಟ್ಟುಕತೆಯೆಂದು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಾಧೆ ಮಾ ವಿರುದ್ಧ ಈ ಹಿಂದೆ ಹಲವು ಆರೋಪಗಳು ಕೇಳಿಬಂದಿದ್ದವು. ಸತ್ಸಂಗದ ವೇಳೆ ಬಾಲಿವುಡ್ ಹಾಡುಗಳಿಗೆ ಅಶ್ಲೀಲವಾಗಿ ನೃತ್ಯ ಮಾಡಿರುವ ಹಾಗೂ ವರದಕ್ಷಿಣೆ ಕಿರುಕುಳ ನೀಡಿದ ಆರೋಪಗಳನ್ನು ರಾಧೆ ಮಾ ಹೊತ್ತಿದ್ದರು. ಅಲ್ಲದೆ, ಈ ಹಿಂದೆ ತಾನು ನೀಲಿ ಚಿತ್ರತಾರೆ ಸನ್ನಿ ಲಿಯೋನ್ ಅವರ ಬಹು ದೊಡ್ಡ ಅಭಿಮಾನಿ ಎಂದು ಹೇಳುವ ಮೂಲಕ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದರು.