ಮುಂಬಯಿ: 1993ರ ಮುಂಬಯಿ ಸರಣಿ ಸ್ಫೋಟದ ದೋಷಿಯಾಗಿ ಗಲ್ಲು ಶಿಕ್ಷೆಗೊಳಗಾಗಿದ್ದ ಯಾಕುಬ್ ಮೆಮೊನ್ ಅಂತ್ಯಕ್ರಿಯೆಗೆ ಮುನ್ನ ನಡೆದ ಶವಯಾತ್ರೆಗೆ ಸೇರಿದ್ದ ಜನಜಂಗುಳಿ ಹಿಂದಿನ ರಹಸ್ಯ ಬಯಲಾಗಿದೆ.
257 ಮಂದಿಯನ್ನು ಬಲಿ ಪಡೆದುಕೊಂಡ ಪಾತಕ ಕೃತ್ಯದಲ್ಲಿ ಶಾಮೀಲಾದ ಕಾರಣಕ್ಕೆ ನೇಣು ಶಿಕ್ಷೆಗೊಳಗಾದಾಗ ಅಷ್ಟೊಂದು ಸಂಖ್ಯೆಯಲ್ಲಿ ಜನ ಹೇಗೆ ಸೇರಿದ್ದರು ಎಂದು ಜನ ಅಚ್ಚರಿಗೊಂಡಿದ್ದರು. ಅದರ ಹಿಂದೆ ಭೂಗತ ಪಾತಕಿ ದಾವುದ್ ಇಬ್ರಾಹಿಂ ಕೈವಾಡ ಇತ್ತು ಎನ್ನುವುದೀಗ ಬಯಲಾಗಿದೆ.
ತನ್ನ ಬಲಗೈ ಬಂಟ ಟೈಗರ್ ಮೆಮೊನ್ ಸೋದರನೂ ಆಗಿದ್ದ ಯಾಕುಬ್ ಸಾವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಪಾತಕಿ ದಾವುದ್, ಮುಂಬಯಿಯಲ್ಲಿರುವ ತನ್ನವರಿಗೆ ಕರೆ ಮಾಡಿ ಯಾಕುಬ್ ಅಂತ್ಯಕ್ರಿಯೆ ಸಂದರ್ಭ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸುವಂತೆ ಆದೇಶ ನೀಡಿದ್ದ ಎಂದು ಮುಂಬಯಿ ಪೊಲೀಸ್ ಮೂಲಗಳು ಹೇಳಿವೆ.
ಮುಂಬಯಿಯಲ್ಲಿರುವ ತಮ್ಮ ಆಪ್ತರು ಹಾಗೂ ಗ್ಯಾಂಗ್‌ನ ಸದಸ್ಯರಿಗೆ ಹಲವಾರು ಕರೆ ಮಾಡಿದ್ದ ದಾವುದ್ ಹಾಗೂ ಆತನ ಸಹವರ್ತಿ ಚೋಟಾ ಶಕೀಲ್, ಅಂತ್ಯಸಂಸ್ಕಾರದ ಸಂದರ್ಭ ಒಗ್ಗಟ್ಟನ್ನು ಪ್ರದರ್ಶಿಸುವ ಆದೇಶ ನೀಡಿದ್ದರು ಎನ್ನುವ ಮಾಹಿತಿ ಸಿಕ್ಕಿದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬಯಿಯ ಮಾಹಿಮ್‌ಗೆ ಯಾಕುಬ್‌ನ ಕಳೇಬರ ಬಂದಾಗ ಹಾಗೂ ಮರೈನ್‌ಲೈನ್ಸ್‌ನ ಮುಸ್ಲಿಂ ಸಮಾಧಿ ಭೂಮಿ ಬಳಿ ಹತ್ತು ಸಾವಿರದಷ್ಟು ಮಂದಿ ಸೇರಿದ್ದರ ಹಿಂದಿನ ರಹಸ್ಯವಿದು. ಮೆಮೊನ್ ಯಾರೆಂದೇ ಗೊತ್ತಿರದವರೂ ಕೂಡ ಆ ದಿನ ಆತನ ಶವ ಸಂಸ್ಕಾರಕ್ಕೆ ಹಾಜರಾಗಿದ್ದರು. ಮುಸ್ಲಿಂ ಸೋದರನ ಶವಯಾತ್ರೆಗೆ ಬಂದಿದ್ದೇವೆ ಎಂದು ಮಾತ್ರ ಕೆಲವರು ಅಂದುಕೊಂಡಿದ್ದರು ಎಂದು ಕೆಲವು ಮುಸ್ಲಿಂ ನಾಯಕರು ಹೇಳುತ್ತಾರೆ.
ಆದರೆ ಮೆಮೊನ್ ಸುಪ್ರೀಂ ಕೋರ್ಟ್‌ಗೆ ಕ್ಷಮಾದಾನ ಅರ್ಜಿ ಸಲ್ಲಿಸಿದಾಗ ಮಾತ್ರ ದಾವೂದ್ ಅಥವಾ ಶಕೀಲ್ ಆರಂಭದಲ್ಲಿ ಯಾವ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಏಕೆಂದರೆ ತಾವೇನಾದರೂ ಪ್ರತಿಕ್ರಿಯಿಸಿದರೆ ಪ್ರತಿಕೂಲ ಪರಿಣಾಮಗಳಾಗಬಹುದು ಎಂಬ ಭೀತಿ ಅವರಲ್ಲಿತ್ತು. ಒಂದು ಸಲ ಕ್ಷಮಾದಾನ ಅರ್ಜಿ ತಿರಸ್ಕೃತವಾದ ಮೇಲೆ ಸಂದರ್ಶನ ನೀಡಿದ್ದ ಚೋಟಾ ಶಕೀಲ್, ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನೇರವಾಗಿ ಬೆದರಿಕೆ ಹಾಕುವ ಧೈರ್ಯ ಪ್ರದರ್ಶಿಸಿದ ಎಂದು ಮೂಲಗಳು ತಿಳಿಸಿವೆ.
ಶಕೀಲ್ ಬೆದರಿಕೆ ದೇಶಕ್ಕೆ ಹಾಕಿದ ಬೆದರಿಕೆ. ಇದು 1993ರ ಸರಣಿ ಸ್ಫೋಟದಲ್ಲಿ ಆತನ ಕೈವಾಡ ಕೂಡ ಇರುವುದನ್ನು ಖಾತರಿ ಪಡಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ ಯಾಕುಬ್ ಮೆಮೊನ್ ಗಲ್ಲು ಶಿಕ್ಷೆ ಬಗ್ಗೆ ಕವನ ಬರೆದು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದ ಉತ್ತರ ಪ್ರದೇಶದ ಎಟಾವ ಜಿಲ್ಲೆಯ ಗೌರವ್ ಚೌಹಾಣ್ ಎಂಬವರಿಗೆ ಪ್ರಾಣ ಬೆದರಿಕೆ ಕರೆಗಳು ಬಂದಿವೆ. ತಮ್ಮ ಮೊಬೈಲ್‌ಗೆ ಆಗಸ್ಟ್ 3ರಂದು ಬೆದರಿಕೆ ಕರೆ ಬಂದಿದ್ದಾಗಿ ಅವರು ಗುರುವಾರ ದೂರು ದಾಖಲಿಸಿದ್ದಾರೆ.