ಮುಂಬೈ: ತೈವಾನ್ ಮೂಲದ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕಾ ಸಂಸ್ಥೆ ಫಾಕ್ಸ್ ಕಾನ್ ಮುಂದಿನ 5 ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ 5 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಫಾಕ್ಸ್ ಕಾನ್ ಘಟಕ ನಿರ್ಮಾಣಕ್ಕೆ ಮಹಾರಾಷ್ಟ್ರದಲ್ಲಿ ಈಗಾಗಲೇ 1 ,500 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ನಿರ್ಮಾಣವಾಗಲಿರುವ ಸಂಸ್ಥೆಯ ಘಟಕ, ಸಂಶೋಧನಾ ಅಭಿವೃದ್ಧಿ, ಹಾಗೂ ಉತ್ಪಾದನೆಯತ್ತ ಹೆಚ್ಚಿನ ಗಮನ ನೀಡಲಿದೆ ಎಂದು ಫಾಕ್ಸ್ ಕಾನ್ ನ ಅಧ್ಯಕ್ಷ ಟೆರ್ರಿ ಗೌ ಹೇಳಿದ್ದಾರೆ. ಆರ್ಥಿಕ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರವನ್ನು ಹೂಡಿಕೆಗೆ ಆಯ್ಕೆ ಮಾಡಿಕೊಂಡಿರುವುದಾಗಿ ಫಾಕ್ಸ್ ಕಾನ್ ಸಂಸ್ಥೆ ತಿಳಿಸಿದೆ.
ಸ್ಥಳೀಯ ಸಂಸ್ಥೆಗಳೊಂದಿಗು ಫಾಕ್ಸ್ ಕಾನ್ ಸಂಸ್ಥೆ ಸಹಭಾಗಿತ್ವ ಹೊಂದಿರಲಿದೆ ಎಂದು ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿಹಾಕಿರುವ ಟೆರ್ರಿ ಗೌ ತಿಳಿಸಿದ್ದಾರೆ. ಸರ್ಕಾರ- ಫಾಕ್ಸ್ ಕಾನ್ ಕಂಪನಿ ನಡುವೆ ಒಪ್ಪಂದದ ವೇಳೆ ಫಾಕ್ಸ್ ಕಾನ್ ಕಂಪನಿಗೆ 1 ,500 ಎಕರೆ ಭೂಮಿಯನ್ನು ಮಂಜೂರು ಮಾಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘೋಷಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಫಾಕ್ಸ್ ಕಾನ್ ಸಂಸ್ಥೆಯ ಘಟಕ ಪ್ರಾರಂಭವಾಗುವುದರಿಂದ 50 ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಫಡ್ನವೀಸ್ ಹೇಳಿದ್ದಾರೆ.