ಮುಂಬಯಿ: ಯಾಕೂಬ್ ಮೆಮೊನ್ ಗಲ್ಲು ಶಿಕ್ಷೆ ವಿಷಯವಾಗಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ, ಕೇಂದ್ರ ಹಾಗೂ ರಾಜ್ಯ ಸರಕಾರ ದೇಶದಲ್ಲಿ ಗಲಭೆ ಸೃಷ್ಟಿಸಲು ಬಯಸಿವೆ ಎಂದಿದ್ದಾರೆ.
‘ಯಾಕೂಬ್ ಉಗ್ರ ನಿಜ. ಆದರೆ, ಆತನ ಗಲ್ಲು ಶಿಕ್ಷೆ ಪ್ರಕ್ರಿಯೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಡ್ರಾಮಾ ಆಗಿ ಪರಿವರ್ತಿಸಿತು. ಹಲವಾರು ಜನರನ್ನು ಕೊಂದ ಪಾತಕಿಯ ಮರಣದಂಡನೆ ಪ್ರಕ್ರಿಯೆಯನ್ನು ಗಮನಿಸಿದ ನಂತರ, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೇಶದಲ್ಲಿ ಗಲಭೆ ಸೃಷ್ಟಿಸಲು ಬಯಸಿರುವುದು ಸ್ಪಷ್ಟವಾಗುತ್ತದೆ,’ ಎಂದು ರಾಜ್ ಕಿಡಿಕಾರಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ವಿರುದ್ಧ ಹರಿಹಾಯ್ದ ರಾಜ್, ‘ಸಲ್ಮಾನ್ ತಲೆಯಲ್ಲಿ ಮೆದುಳಿಲ್ಲ. ಅವರ ತಂದೆ ಜವಾಬ್ದಾರಿಯುತ ವ್ಯಕ್ತಿ. ಸಲ್ಮಾನ್ ಪತ್ರಿಕೆ ಓದುವುದಿಲ್ಲ. ಕಾನೂನಿನ ತಿಳಿವಳಿಕೆ ಇಲ್ಲ. ಹಾಗಾಗಿ, ಯಾಕೂಬ್ ಪರ ಟ್ವೀಟ್ ಮಾಡಿದ್ದಾನೆ. ಆತನಿಗೆ ಕ್ಷಮಾದಾನ ನೀಡುವಂತೆ ಹಲವರು ರಾಷ್ಟ್ರಪತಿಗೆ ಮನವಿ ಮಾಡಿದರು. ಸುಪ್ರೀಂಕೋರ್ಟ್ ಆದೇಶವನ್ನು ಜನ ಹೇಗೆ ಪ್ರಶ್ನಿಸುತ್ತಾರೆ?’ ಎಂದು ಅವರು ಪ್ರಶ್ನಿಸಿದ್ದಾರೆ.
ಮೌನ್ ಕೀ ಬಾತ್: ‘ಯಾವುದೇ ವಿಷಯವಾಗಿ ಪ್ರಧಾನಿ ಮಾತನಾಡುವುದಿಲ್ಲ, ಘೋಷಣೆಗಳನ್ನಷ್ಟೇ ಹೊರಡಿಸುತ್ತಾರೆ. ಅವರ ಮನ್ ಕೀ ಬಾತ್ ಕಾರ್ಯಕ್ರಮ ಮೌನ್ ಕೀ ಬಾತ್ ಆಗಿದೆ,’ ಎಂದು ರಾಜ್ ವ್ಯಂಗ್ಯವಾಡಿದ್ದಾರೆ.